ಬೆಂಗಳೂರು :  ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಮಹತ್ವದ ಸಭೆಯು ಶುಕ್ರವಾರ ನಡೆಯುತಿದ್ದು, ನಿಗಮ-ಮಂಡಳಿ ನೇಮಕ ಹಾಗೂ ಸಚಿವ ಸಂಪುಟ ವಿಸ್ತರಣೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮೂರನೇ ಬಾರಿಗೆ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಿಗಮ-ಮಂಡಳಿ ನೇಮಕ, ಸಚಿವ ಸಂಪುಟ ವಿಸ್ತರಣೆ, ಶಾಸಕರ ಗೊಂದಲಮಯ ಹೇಳಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಸಮನ್ವಯ ಸಮಿತಿಗೆ ಜೆಡಿಎಸ್‌, ಕಾಂಗ್ರೆಸ್‌ ರಾಜ್ಯಾಧ್ಯಕ್ಷರ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸರ್ಕಾರ 100 ದಿನ ಪೂರೈಸಿದರೂ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ನಿಗಮ-ಮಂಡಳಿ ನೇಮಕ ವಿಳಂಬ ಮಾಡುವ ಮೂಲಕ ಸಚಿವ ಸ್ಥಾನ ವಂಚಿತರು ಹಾಗೂ ಹಿರಿಯ ಶಾಸಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಈಗಾಗಲೇ ಶಾಸಕರು ತೀವ್ರ ಅಸಮಾಧಾನದಲ್ಲಿದ್ದಾರೆ. ಹೀಗಾಗಿ ಸಮನ್ವಯ ಸಮಿತಿ ಸಭೆಯಲ್ಲಿ ನಿಗಮ-ಮಂಡಳಿಗಳ ನೇಮಕದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಲಿದೆ. ಉಭಯ ಪಕ್ಷಗಳ ನಡುವೆ ನಿಗಮ-ಮಂಡಳಿ ಹಂಚಿಕೆ ಹಾಗೂ ತ್ವರಿತವಾಗಿ ನೇಮಕ ಮಾಡುವ ಪ್ರಕ್ರಿಯೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇನ್ನು ಸಚಿವಾಕಾಂಕ್ಷಿಗಳು ಸಹ ಸಚಿವ ಸಂಪುಟ ವಿಸ್ತರಣೆಗೆ ಕಾತುರರಾಗಿದ್ದಾರೆ. ಕೆಲ ಶಾಸಕರು ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವ ಬೀರಿದರೆ ಕೆಲವರು ಪಕ್ಷದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಚಿವ ಸಂಪುಟ ವಿಸ್ತರಣೆ ಮೂಲಕ ಅಸಮಾಧಾನಗೊಂಡಿರುವ ಶಾಸಕರನ್ನು ಸಂತೃಪ್ತಗೊಳಿಸುವ ಬಗ್ಗೆಯೂ ಸಮನ್ವಯ ಸಮಿತಿ ಸಭೆಯಲ್ಲಿ ಮಾತುಕತೆ ನಡೆಯಬಹುದು ಎನ್ನಲಾಗಿದೆ.

ಇನ್ನು ಶಾಸಕರು ಸರ್ಕಾರದ ಬಗ್ಗೆ ಗೊಂದಲಮಯ ಹಾಗೂ ವಿರುದ್ಧದ ಹೇಳಿಕೆಗಳಿಂದ ಸರ್ಕಾರದ ವರ್ಚಸ್ಸಿಗೆ ಪೆಟ್ಟು ಬೀಳುತ್ತಿದೆ. ಹೀಗಾಗಿ ಶಾಸಕರ ಇಂತಹ ಹೇಳಿಕೆಗಳನ್ನು ನಿಭಾಯಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪಡಿತರ ಅಕ್ಕಿ ಹೆಚ್ಚಳಕ್ಕೆ ಪಟ್ಟು ಸಾಧ್ಯತೆ:  ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಪ್ರಕಾರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಸಾಮಾನ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಆದರೆ, ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಪ್ರತಿಯೊಬ್ಬರಿಗೆ ತಲಾ 7 ಕೆ.ಜಿ. ಅಕ್ಕಿ ನೀಡುತ್ತಿದ್ದುದನ್ನು ಕುಮಾರಸ್ವಾಮಿ 5 ಕೆ.ಜಿ.ಗೆ ಇಳಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದರು. ಹೀಗಾಗಿ ಅಕ್ಕಿ ಪ್ರಮಾಣ ಹೆಚ್ಚಳ ಮಾಡುವ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಪಟ್ಟು ಹಿಡಿಯುವ ಸಾಧ್ಯತೆ ಇದೆ.

ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಎಚ್‌. ವಿಶ್ವನಾಥ್‌ ಹಾಗೂ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌ ಇಬ್ಬರೂ ಸಮನ್ವಯ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಸಮನ್ವಯ ಸಮಿತಿಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುವುದೇ ಎಂಬ ತೀವ್ರ ಕುತೂಹಲವಿದೆ. ಕಾಂಗ್ರೆಸ್‌ನ ಸದಸ್ಯರಂತೂ ಈ ವಿಷಯ ಪ್ರಸ್ತಾಪಿಸುವುದಿಲ್ಲ. ಜೆಡಿಎಸ್‌ ನಾಯಕರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ಆಗ ಹೊಸ ಸದಸ್ಯರ ಸೇರ್ಪಡೆ ವಿಚಾರದ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದೆ.


ಏನೇನು ಚರ್ಚೆ?

1. ನಿಗಮ, ಮಂಡಳಿ ನೇಮಕಾತಿ ಅಂತಿಮಗೊಳಿಸುವ ಬಗ್ಗೆ ಚರ್ಚೆ

2. ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುವ ಬಗ್ಗೆ ಕುತೂಹಲ

3. ಮಿತ್ರಪಕ್ಷಗಳ ರಾಜ್ಯಾಧ್ಯಕ್ಷರ ಸೇರ್ಪಡೆ ಕುರಿತು ಚರ್ಚೆ ಸಂಭವ

4. ಸರ್ಕಾರದ ಬಗ್ಗೆ ಗೊಂದಲಕಾರಿ ಹೇಳಿಕೆ ನಿಲ್ಲಿಸುವ ಬಗ್ಗೆ ಚರ್ಚೆ

5. ಪಡಿತರ ಅಕ್ಕಿ 5 ಕೆ.ಜಿ.ಯಿಂದ 7 ಕೆ.ಜಿ.ಗೆ ಏರಿಸುವ ಪ್ರಸ್ತಾಪ