ಮಂಡ್ಯ[ಆ.04]: ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೇ ನಿರೀಕ್ಷೆಯಂತೆ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ಚುನಾವಣಾ ದೋಸ್ತಿಗೂ ಪೂರ್ಣ ವಿರಾಮ ಬಿದ್ದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇನ್ಮುಂದೆ ಮೈತ್ರಿ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಜತೆಗೆ, ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಶನಿವಾರ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನು ಮುಂದೆ ಯಾವ ಕಾರಣಕ್ಕೂ ಯಾವುದೇ ಪಕ್ಷದೊಂದಿಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿ ಸಹವಾಸವೇ ಬೇಡ ಎಂದು ಹೇಳಿದರು.

ಅತೃಪ್ತ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ 17 ಸ್ಥಾನಗಳಿಗೆ ಸದ್ಯದಲ್ಲೇ ಉಪ ಚುನಾವಣೆ ನಡೆಯಲಿದ್ದು, ಈ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುಗಿಯ ಅಧ್ಯಾಯ ಎಂದು ಕುಮಾರಸ್ವಾಮಿ ಹೇಳಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಮೈತ್ರಿ ಕುರಿತು ಎರಡೂ ಪಕ್ಷಗಳಲ್ಲಿ ಅಸಮಾಧಾನದ ಹೊಗೆ ಎದ್ದಿತ್ತು. ಆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕವಂತು ಕೆಲ ಮುಖಂಡರು, ಕಾರ್ಯಕರ್ತರು ಬಹಿರಂಗವಾಗಿಯೇ ಮೈತ್ರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ ತುಮಕೂರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಿನ ಬಳಿಕವಂತು ಜೆಡಿಎಸ್‌ ಕಾರ್ಯಕರ್ತರು ಮೈತ್ರಿ ಸಹವಾಸವೇ ಬೇಡ ಎಂದು ವರಿಷ್ಠರ ಮುಂದೆ ಅವಲತ್ತುಕೊಂಡಿದ್ದರು. ಇನ್ನು ಕಾಂಗ್ರೆಸ್‌ನಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮ ಆದಿಯಾಗಿ ಬಹುತೇಕ ಮುಖಂಡರು ಪಕ್ಷದ ವೇದಿಕೆಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದರು.