ಕಾಂಗ್ರೆಸ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಗೆ ಮಾರ್ಚ್ ಅಥವಾ ಫೆಬ್ರವರಿ ವೇಳೆಗೆ ಪ್ರಣಾಳಿಕೆ ಬಿಡುಗಡೆ ಮಾಡುವ ಸಾಧ್ಯತೆಗಳಿದೆ. 

ಬೆಂಗಳೂರು : ಮುಂಬರುವ ಲೋಕಸಭಾ ಚುಣಾವಣೆಗೆ ಸಿದ್ಧತೆ ನಡೆಸಿದ್ದು, ಫೆಬ್ರವರಿ-ಮಾರ್ಚ್ ವೇಳೆಗೆ ಕಾಂಗ್ರೆಸ್‌ ಪ್ರಣಾಳಿಕೆ ಸಿದ್ಧವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ ತಿಳಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆ ರಚನೆಗೆ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಿದೆ. 

ಕಳೆದ ಒಂದು ತಿಂಗಳಿನಿಂದ ಅದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಮಿತಿಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅಧ್ಯಕ್ಷರಾಗಿದ್ದಾರೆ. ಪ್ರಮುಖ 20 ವಿಷಯಗಳನ್ನು ಸಿದ್ಧಪಡಿಸಿದ್ದೇವೆ. ಜನಧ್ವನಿ ಹೆಸರಿನಲ್ಲಿ ದೇಶಾದ್ಯಂತ ಜನರ ಅಭಿಪ್ರಾಯ ಪಡೆಯಲಾಗುವುದು. ತಜ್ಞರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿಯ ಸಂಶೋಧನಾ ವಿಭಾಗ ಸಲಹೆ ನೀಡುತ್ತದೆ. ಜನವರಿ ಅಂತ್ಯದವರೆಗೆ ಪ್ರಣಾಳಿಕೆ ರಚನಾ ಸಮಿತಿ ಕಾರ್ಯನಿರ್ವಹಿಸಲಿದೆ. ಸಲಹೆ ಪಡೆದು, ಚರ್ಚಿಸಿ ನಮ್ಮ ಅಭಿಪ್ರಾಯ ನೀಡುತ್ತೇವೆ. ಫೆಬ್ರವರಿ-ಮಾಚ್‌ರ್‍ ವೇಳೆಗೆ ಪ್ರಣಾಳಿಕೆ ಸಿದ್ಧವಾಗಲಿದೆ. ಸಮಯ ಇದ್ದರೆ, ಪ್ರತಿ ಊರಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸುವ ಆಶಯ ಇದೆ. 

ಏಪ್ರಿಲ್‌-ಮೇ ತಿಂಗಳಲ್ಲಿ ಚುನಾವಣೆ ನಿರೀಕ್ಷಿಸಿದ್ದೇವೆ. ಅದಕ್ಕೂ ಮೊದಲೇ ಚುನಾವಣೆ ಘೋಷಣೆಯಾದರೂ ಸಿದ್ಧರಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಸಾರ್ವಜನಿಕರು, ವಿವಿಧ ಕ್ಷೇತ್ರದ ತಜ್ಞರು, ವಿದ್ಯಾರ್ಥಿಗಳು, ಮಹಿಳೆಯರು, ಸಾಮಾನ್ಯ ನಾಗರಿಕರ ಅಭಿಪ್ರಾಯಗಳಿಗೆ ಆದ್ಯತೆ ನೀಡಲಾಗುವುದು. ರಾಜ್ಯದಲ್ಲಿ ಮನ್ಸೂರ್‌ ಅಲಿಖಾನ್‌ ಪ್ರಣಾಳಿಕೆ ಸಮಿತಿಯ ಉಸ್ತುವಾರಿ ವಹಿಸಿರುತ್ತಾರೆ ಎಂದು ಹೇಳಿದರು.