ನಾನು ದುರಂತ ನಾಯಕನೋ? ದೃಢನಾಯಕನೋ ಸದ್ಯದಲ್ಲೇ ಗೊತ್ತಾಗಲಿದೆ: ಎಚ್ ಡಿಕೆ

Congress is not reason for my tears says CM Kumaraswamy
Highlights

-ಜನರಿಂದ ಬೆಂಬಲ ಸಿಗುತ್ತಿಲ್ಲವೆಂಬ ನೋವಿನಿಂದ ಅತ್ತಿದ್ದೇನೆ : ಎಚ್‌ಡಿಕೆ

-ಕಾಂಗ್ರೆಸ್ಸಿನಿಂದ ಮುಕ್ತ ಸಹಕಾರ ಸಿಗುತ್ತಿದೆ, ಯಾವುದೇ ತೊಂದರೆ ಆಗುತ್ತಿಲ್ಲ

ರಾಮನಗರ (ಜು. 17): ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನವರು ನೋವು ಕೊಡುತ್ತಿದ್ದಾರೆಂದು ನಾನು ಕಣ್ಣೀರಿಟ್ಟಿಲ್ಲ. ಸಾರ್ವಜನಿಕ ವಲಯದಿಂದ ಬೆಂಬಲ ಸಿಗುತ್ತಿಲ್ಲವೆಂಬ ನೋವಿಗೆ ಕಣ್ಣೀರಿಟ್ಟಿದ್ದೇನೆ. ಅದನ್ನು ಮಾಧ್ಯಮದವರು ತಿರುಚಿ ತಪ್ಪು ಸಂದೇಶ ನೀಡಿರುವುದು ಸರಿಯಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಒಡಕು ಉಂಟಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಕಾಂಗ್ರೆಸ್ ನಾಯಕರು ತಮಗೆ ಮುಕ್ತ ಸಹಕಾರ ನೀಡುತ್ತಿದ್ದಾರೆ. ನನ್ನ ಕಾರ್ಯಕ್ರಮಗಳನ್ನು ನೋಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ನನಗೆ ಯಾವುದೇ ರೀತಿ ತೊಂದರೆ ಕೊಡುತ್ತಿಲ್ಲ. ಒಳ್ಳೆಯ ಕೆಲಸ ಮಾಡುವಾಗ ಜನರಿಂದ ಉತ್ತಮ ಬೆಂಬಲ ಸಿಗುತ್ತಿಲ್ಲ ಎಂಬ ಭಾವನೆ ನನ್ನ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಹೀಗಾಗಿ, ಕಣ್ಣೀರು ಹಾಕಿದ್ದೇನೆಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾವ ನಾಯಕ ಎಂದು ಗೊತ್ತಾಗಲಿದೆ? 

 ಕುರ್ಚಿ ಉಳಿಸಿಕೊಳ್ಳಲು ರೈತರ ಸಾಲಮನ್ನಾ ಮಾಡಿಲ್ಲ. ರೈತರ ಹಿತದೃಷ್ಟಿಯಿಂದ ಮತ್ತು ನನ್ನ ಬದ್ಧತೆಯಿಂದ ಸಾಲ ಮನ್ನಾ ಮಾಡಿದ್ದೇನೆ. ಆದರೆ, ಬಿಜೆಪಿ ನಾಯಕರು ನನ್ನ ಬಗ್ಗೆ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ನಾನು ದುರಂತ ನಾಯಕನೋ? ದೃಢನಾಯಕನೋ ಎಂಬುದು ಮುಂದಿನ ದಿನಗಳಲ್ಲಿ ಅವರಿಗೆ ಗೊತ್ತಾಗಲಿದೆ ಎಂದು ತೀಕ್ಷ್ಣವಾಗಿ ಉತ್ತರಿಸಿದರು. ದುರಂತ ನಾಯಕನಾಗಿ ಇದೀಗ 44 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದರೆ ದೃಢ ನಾಯಕರು ಎನಿಸಿಕೊಂಡಿರುವವರಿಂದ ಸಾಲ ಮನ್ನಾ ಏಕೆ ಆಗಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಬೆಂಬಲ ನೀಡಿ, ನಂತರ ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ೧೫೦ ಕೋಟಿ ರು. ಹಗರಣ ಮಾಡಿದ್ದೇನೆಂದು ಸುಳ್ಳು ಆಪಾದನೆ ಹೊರಿಸಿ ಜನರ ಮುಂದೆ ನನ್ನ ಹೆಸರು ಕೆಡಿಸಲು ಹೋದ ಬಿಜೆಪಿ ನಾಯಕರ ಟೀಕೆಗೆ ಉತ್ತರ ಕೋಡಬೇಕಾಗಿಲ್ಲ. ದೇವರು ಕೊಟ್ಟ ಅಧಿಕಾರ ಎಲ್ಲಿಯವರೆಗೂ ಬೆಂಬಲ ಸಿಗುತ್ತದೆಯೋ ಅಲ್ಲಿಯವರೆಗೂ ಯಶಸ್ವಿಯಾಗಿ ನಡೆಸುತ್ತೇನೆ ಎಂದರು.

ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಜೊತೆಗೆ ರೈತ ಪರವಾದ ಚಿಂತನೆ ನಡೆಸುತ್ತಿದೆ. ಇದಕ್ಕೆ ಕಾಂಗ್ರೆಸ್ ಮುಕ್ತ ಸಹಕಾರವಿದ್ದು, ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರಿಗೆ ಕೃತಜ್ಞನಾಗಿದ್ದೇನೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ದಿಟ್ಟ ಕ್ರಮ ಕೈಗೊಂಡಾಗ ಸಾರ್ವಜನಿಕವಾಗಿ ಬೆಂಬಲ ದೊರಕಬೇಕು. ಅದು ಸಾಧ್ಯವಾಗದೆ ಇದ್ದಾಗ ನನಗೆ ನೋವಾಗುವುದು ಸಹಜ ಎಂದು ಹೇಳಿದರು. 

loader