ತಮ್ಮ ಕಾರ್ಯಕರ್ತರನ್ನು ಮೆಚ್ಚಿಸಲು ಉಗ್ರವಾಗಿ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಹಿಂದುಗಳ ಭಾವನೆಗೆ ಧಕ್ಕೆಯಾಗುವಂತಹ ಕೆಲ ಹೇಳಿಕೆಗಳನ್ನು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ನೀಡಿದ್ದರು.

ಬೆಂಗಳೂರು(ಜ.10): ಜೆಡಿಎಸ್‌ನ ಬಂಡಾಯ ಶಾಸಕ ಜಮೀರ್ ಅಹಮದ್ ಅವರು ಕಾಂಗ್ರೆಸ್ ಸೇರುವುದಕ್ಕೂ ಮುನ್ನವೇ ಅವರ ಕಟು ಮಾತುಗಳಿಗೆ ಕಾಂಗ್ರೆಸ್ ನಾಯಕತ್ವ ಬ್ರೇಕ್ ಹಾಕಿದೆ!

ಇದು ಬಿಜೆಪಿಯ ಉಗ್ರ ಹಿಂದುತ್ವಕ್ಕೆ ಪ್ರತಿಯಾಗಿ ಮೃದು ಹಿಂದುತ್ವ ಪ್ರತಿಪಾದನೆಯ ತಂತ್ರ ಹೆಣೆದಿರುವ ಕಾಂಗ್ರೆಸ್‌'ನ ತಂತ್ರಗಾರಿಕೆಯ ಮುಂದುವರೆದ ಭಾಗ. ಹೌದು. ಅಲ್ಪಸಂಖ್ಯಾತರನ್ನು ತೀವ್ರ ಒಲೈಸುವ ಹಾಗೂ ಹಿಂದುಗಳಿಗೆ (ವಿಶೇಷವಾಗಿ ಒಕ್ಕಲಿಗರಿಗೆ) ತೀವ್ರ ಬೇಸರವಾಗುವ ರೀತಿಯ ಹೇಳಿಕೆ ನೀಡಬೇಡಿ. ಸಾರ್ವಜನಿಕ ಭಾಷಣ ಮಾಡುವ ವೇಳೆ ಸಂಯಮ ಕಾಯ್ದುಕೊಳ್ಳಿ ಎಂದು ಪಕ್ಷ ಸೇರಲು ಅಣಿಯಾಗಿರುವ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಕಾಂಗ್ರೆಸ್‌'ನ ಉನ್ನತ ಮೂಲಗಳು ತಿಳಿಸಿವೆ.

ತಮ್ಮ ಕಾರ್ಯಕರ್ತರನ್ನು ಮೆಚ್ಚಿಸಲು ಉಗ್ರವಾಗಿ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಹಿಂದುಗಳ ಭಾವನೆಗೆ ಧಕ್ಕೆಯಾಗುವಂತಹ ಕೆಲ ಹೇಳಿಕೆಗಳನ್ನು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ನೀಡಿದ್ದರು. ಇದು ಕಾಂಗ್ರೆಸ್ ನಾಯಕತ್ವದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುತ್ತವೆ ಈ ಮೂಲಗಳು. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ನಡೆದ ಜಟಾಪಟಿ ವೇಳೆ ಜಮೀರ್ ಅಹಮದ್ ಅವರು ಬಿಜೆಪಿ ಹಾಗೂ ಅದರ ನಾಯಕರನ್ನು ತೀವ್ರವಾಗಿ ಟೀಕಿಸಿದ್ದರು. ಜತೆಗೆ, ಟಿಪ್ಪು ಸುಲ್ತಾನ್ ಜಯಂತಿ ವಿಧಾನಸೌಧದಲ್ಲೇ ಆಚರಣೆಯಾಗುವಂತೆ ನೋಡಿಕೊಳ್ಳಲು ತಾವೇ ಕಾರಣ ಎಂದು ಬಿಂಬಿಸಿಕೊಂಡಿದ್ದರು. ವಿಧಾನಸೌಧಕ್ಕೆ ತಮ್ಮ ಅನುಯಾಯಿಗಳ ಪ್ರವೇಶಕ್ಕೆ ಪೊಲೀಸರು ತಡೆಯೊಡ್ಡಿದಾಗ ‘ವಿಶೇಷ ಮುತುವರ್ಜಿ’ ವಹಿಸಿ ತಾವೇ ಅವರನ್ನು ಕಾರ್ಯಕ್ರಮಕ್ಕೂ ಕರೆದೊಯ್ದಿರುವುದಾಗಿ ಹೇಳಿಕೆ ನೀಡಿದ್ದರು.

ಇದಲ್ಲದೆ, ಜೆಡಿಎಸ್‌ನ ವರಿಷ್ಠರಾದ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಳ್ಳುತ್ತಿದ್ದರು. ಜಮೀರ್ ಅವರ ಈ ಧೋರಣೆ ಹಿಂದುಗಳಲ್ಲಿ ಅದರಲ್ಲೂ ವಿಶೇಷವಾಗಿ ಒಕ್ಕಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಪಕ್ಷ ಸೇರುವ ಮುನ್ನವೇ ಜಮೀರ್ ಈ ರೀತಿ ತೀವ್ರ ವಾಗ್ದಾಳಿ ನಡೆಸುತ್ತಿರುವುದು ಪಕ್ಷಕ್ಕೆ ತೊಂದರೆ ನೀಡಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರಲ್ಲಿ ಉಂಟಾಗಿತ್ತು. ಕಾಂಗ್ರೆಸ್‌'ನ ಹಿರಿಯರ ಸಭೆ ವೇಳೆ ಈ ವಿಚಾರ ಚರ್ಚೆಗೆ ಬಂದಾಗ ಜಮೀರ್‌'ಗೆ ತಿಳಿಹೇಳುವಂತೆ ಇತರೆ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಹೇಳಿದ್ದರು ಎನ್ನಲಾಗಿದೆ. ಇದಾದ ನಂತರ ಜಮೀರ್‌'ಗೆ ಕಾಂಗ್ರೆಸ್‌'ನಿಂದ ಸೂಚನೆ ಹೋಗಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಇತ್ತೀಚೆಗೆ ಜಮೀರ್ ಅವರು ದೇವೇಗೌಡರ ಕುಟುಂಬ ಹಾಗೂ ಬಿಜೆಪಿ ನಾಯಕರ ವಿರುದ್ಧ ನೀಡುತ್ತಿದ್ದ ತೀವ್ರ ಟೀಕೆಗಳನ್ನು ಕಡಿಮೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ವರದಿ: ಎಸ್. ಗಿರೀಶ್ ಬಾಬು, ಕನ್ನಡಪ್ರಭ