ಕಾಂಗ್ರೆಸ್ ಉಸ್ತುವಾರಿಯೇ ತಮ್ಮನ್ನು ಬಂದು ಭೇಟಿಯಾಗಲಿ ಎಂದು ಬಯಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೂತನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಚಳ್ಳೆಹಣ್ಣು ತಿನ್ನಿಸಿದ್ದು, ಕಡೆಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೆಪಿಸಿಸಿ ಕಚೇರಿಗೆ ಆಗಮಿಸಿ ಅವರನ್ನು ಉಪಾಹಾರಕ್ಕೆ ಆಹ್ವಾನಿಸುವ ಅನಿವಾರ್ಯ ಸೃಷ್ಟಿಸಿದ ಘಟನೆ ನಡೆದಿದೆ.

ಬೆಂಗಳೂರು (ಮೇ.09): ಕಾಂಗ್ರೆಸ್ ಉಸ್ತುವಾರಿಯೇ ತಮ್ಮನ್ನು ಬಂದು ಭೇಟಿಯಾಗಲಿ ಎಂದು ಬಯಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೂತನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಚಳ್ಳೆಹಣ್ಣು ತಿನ್ನಿಸಿದ್ದು, ಕಡೆಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೆಪಿಸಿಸಿ ಕಚೇರಿಗೆ ಆಗಮಿಸಿ ಅವರನ್ನು ಉಪಾಹಾರಕ್ಕೆ ಆಹ್ವಾನಿಸುವ ಅನಿವಾರ್ಯ ಸೃಷ್ಟಿಸಿದ ಘಟನೆ ನಡೆದಿದೆ.
ರಾಜ್ಯದ ರಾಜಕೀಯ ಪರಿಸ್ಥಿತಿ ಅರಿಯಲು ಮೂರು ದಿನಗಳ ಭೇಟಿಗಾಗಿ ಸೋಮವಾರವೇ ವೇಣುಗೋಪಾಲ್ ಹಾಗೂ ತಂಡ ನಗರಕ್ಕೆ ಆಗಮಿಸಿದರೂ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಲಿಲ್ಲ. ಬದಲಾಗಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಇತರ ನಾಯಕರು ಭೇಟಿಯಾಗಿ ಸ್ವಾಗತಿಸಿದ್ದರು. ಈ ವೇಳೆ ಕಾರ್ಯಕ್ರಮ ಹಾಗೂ ಮಂಡ್ಯ ಪ್ರವಾಸದಲ್ಲಿ ವ್ಯಸ್ತರಾಗಿದ್ದ ಸಿಎಂ, ವೇಣುಗೋಪಾಲ್ ಅವರನ್ನು ಖುದ್ದಾಗಿ ಕಾಣಲಿಲ್ಲ. 
ಆದರೆ, ಸಿಎಂ ಸಿದ್ದರಾಮಯ್ಯ ಅವರ ಆಪ್ತರಾದ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರು ಸೋಮವಾರ ವೇಣುಗೋಪಾಲ್ ಅವರನ್ನು ಭೇಟಿಯಾಗಿ ರಾತ್ರಿ ಊಟಕ್ಕಾಗಿ ಸಿಎಂ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಆದರೆ, ಇದನ್ನು ನಯವಾಗಿಯೇ ತಿರಸ್ಕರಿಸಿದ ವೇಣುಗೋಪಾಲ್ ಅವರು ರಾತ್ರಿ ಊಟಕ್ಕೆ ತೆರಳಲಿಲ್ಲ. ಅಲ್ಲದೆ, ಮುಖ್ಯಮಂತ್ರಿಯವರಿಗೆ ತಮ್ಮನ್ನು ಭೇಟಿಯಾಗುವ ಇಚ್ಛೆಯಿದ್ದರೆ ಕುಮಾರಕೃಪಾ ಅತಿಥಿ ಗೃಹಕ್ಕೆ ಅಥವಾ ಕೆಪಿಸಿಸಿ ಕಚೇರಿಗೆ ಬರಲಿ ಎಂಬ ಸಂದೇಶ ರವಾನಿಸಿದ್ದರು ಎನ್ನಲಾಗಿದೆ. 
ಒಂದು ವೇಳೆ ಸಿಎಂ ಬ್ಯುಸಿಯಿದ್ದರೆ ಬುಧವಾರ ಹೇಗೂ ಸಿಎಂ ಅವರೊಂದಿಗೆ ನೇರಾನೇರ ಭೇಟಿ ನಿಗದಿಯಾಗಿದೆ. ಆಗಲೇ ಭೇಟಿ ಮಾಡೋಣ ಎಂದು ಖಡಕ್ಕಾಗಿ ಹೇಳಿದರು ಎನ್ನಲಾಗಿದೆ. ರಾಜ್ಯ ಉಸ್ತುವಾರಿಯಾಗಿ ಮೊದಲ ಬಾರಿಗೆ ಆಗಮಿಸಿರುವ ವೇಣುಗೋಪಾಲ್ ಅವರ ಈ ಧೋರಣೆ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ಸಿಲುಕಿಸಿತ್ತು ಎನ್ನಲಾಗಿದೆ. ನಿಕಟಪೂರ್ವ ಉಸ್ತುವಾರಿ ದಿಗ್ವಿಜಯಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲ ಸಿಎಂ ನಿವಾಸಕ್ಕೆ ತೆರಳುತ್ತಿದ್ದರು. ಆದರೆ, ಮೊದಲ ಬಾರಿ ಆಗಮಿಸಿರುವ ವೇಣುಗೋಪಾಲ್ ಅವರನ್ನು ಮೂರನೇ ದಿನ ಭೇಟಿ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಆಪ್ತರ ಸಲಹೆ ಮೇರೆಗೆ ಕಡೆಗೂ ಸಿಎಂ ಅವರೇ ವೇಣುಗೋಪಾಲ್‌ರನ್ನು ಭೇಟಿ ಮಾಡಲು ನಿರ್ಧರಿಸಿದರು ಎನ್ನಲಾಗಿದೆ.
ಅದರಂತೆ, ಮಂಗಳವಾರ ರಾಜ್ಯಪಾಲರ ಭೇಟಿಯ ನಂತರ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂಗುಚ್ಛ ನೀಡಿ ವೇಣುಗೋಪಾಲ್ ಅವರನ್ನು ಅಭಿನಂದಿಸಿದರು. ಅಲ್ಲದೆ, ಬುಧವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ಉಪಾಹಾರಕ್ಕಾಗಿ ಆಗಮಿಸುವಂತೆಯೂ ಆಹ್ವಾನ ನೀಡಿದರು. ಇದಕ್ಕೆ ವೇಣುಗೋಪಾಲ್ ಹಾಗೂ ಅವರ ತಂಡ ಒಪ್ಪಿದ್ದು, ಬುಧವಾರ ಸಿಎಂ ನಿವಾಸಕ್ಕೆ ಉಪಾಹಾರಕ್ಕಾಗಿ ತೆರಳಲಿದ್ದಾರೆ.