ಮತ್ತೆ ಸಚಿವರಾಗಬೇಕೆ? ಹೆಚ್ಚು ಶಾಸಕರ ಗೆಲ್ಲಿಸಿ

First Published 7, Apr 2018, 9:32 AM IST
Congress Give Offer To Leaders
Highlights

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಆಗ ಸಚಿವರಾಗಬೇಕೇ? ಹಾಗಿದ್ದರೆ ನೀವು ಉಸ್ತುವಾರಿಯಾಗಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆಯನ್ನು ಹೆಚ್ಚು ಮಾಡಿ. ಇದಾಗದ ಪಕ್ಷದಲ್ಲಿ ಸಚಿವ ಸ್ಥಾನದ ಕನಸು ಬಿಡಿ.

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಆಗ ಸಚಿವರಾಗಬೇಕೇ? ಹಾಗಿದ್ದರೆ ನೀವು ಉಸ್ತುವಾರಿಯಾಗಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆಯನ್ನು ಹೆಚ್ಚು ಮಾಡಿ. ಇದಾಗದ ಪಕ್ಷದಲ್ಲಿ ಸಚಿವ ಸ್ಥಾನದ ಕನಸು ಬಿಡಿ.

ಹೀಗಂತ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂದೇಶ ರವಾನಿಸುವಂತೆ ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯಾದ್ಯಂತ ಆರು ಹಂತಗಳಲ್ಲಿ ಜನಾಶೀರ್ವಾದ ರಾರ‍ಯಲಿ ನಡೆಸಿದ ರಾಹುಲ್‌ ಗಾಂಧಿ ಅವರು ತಮ್ಮ ಪ್ರತಿ ಜಿಲ್ಲೆಯ ಭೇಟಿ ವೇಳೆಯೂ ಅಲ್ಲಿನ ಸ್ಥಳೀಯ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪಕ್ಷದ ಕೆಲಸದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಕೊಟ್ಟಿಲ್ಲ ಎಂದು ಸ್ಥಳೀಯ ಮುಖಂಡರು ನೇರವಾಗಿ ರಾಹುಲ್‌ ಗಾಂಧಿ ಅವರಿಗೆ ದೂರು ನೀಡಿದ್ದಾರೆ. ಪಕ್ಷದ ಕಚೇರಿಗಳಿಗೆ ಸಚಿವರು ಬಂದಿಲ್ಲ. ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಿಂದಾಗಿ ಪಕ್ಷ ಸಂಘಟನೆಗೆ ತೊಂದರೆಯಾಗಿದೆ ಎಂದು ಹಲವು ಜಿಲ್ಲೆಗಳ ನಾಯಕರಿಂದ ದೂರು ರಾಹುಲ್‌ಗೆ ಮುಟ್ಟಿದೆ.

ಸಚಿವರಾದವರು ಸರ್ಕಾರದ ಕೆಲಸದ ಜತೆಗೆ ಪಕ್ಷ ಕಟ್ಟುವ ಕೆಲಸವನ್ನು ಮಾಡಿರಬೇಕು. ಇದಾಗದ ಪಕ್ಷದಲ್ಲಿ ಅವರಿಗೆ ಸಚಿವ ಸ್ಥಾನ ನೀಡಿ ಪ್ರಯೋಜನವೇನು ಎಂದು ಈ ಸಂದರ್ಭದಲ್ಲಿ ರಾಹುಲ್‌ ಅವರು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಈ ಎಲ್ಲಾ ಅನುಭವಗಳ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರಿಗೆ ಒಂದು ಸೂಚನೆ ನೀಡಿದ್ದು, ಅದರ ಪ್ರಕಾರ ಇನ್ನು ಸಚಿವರ ಸಾಮರ್ಥ್ಯವನ್ನು ಅವರು ತಮ್ಮ ಕ್ಷೇತ್ರದಲ್ಲಿ ಎಷ್ಟುಶಾಸಕರನ್ನು ಆರಿಸಿಕೊಂಡು ಬರುತ್ತಾರೆ ಎಂಬುದರ ಆಧಾರದ ಮೇಲೆ ನಿರ್ಧರಿಸಬೇಕು.

ರಾಜ್ಯದಲ್ಲಿ ಮತ್ತೆ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ಶಾಸಕರನ್ನು ಆಯ್ಕೆ ಮಾಡಿಕೊಂಡು ಬರುವ ಸಾಮರ್ಥ್ಯವನ್ನೇ ಮಾನದಂಡ ಮಾಡಬೇಕು. ಹಿರಿತನ, ಜಾತಿ ಹಾಗೂ ಪ್ರಾದೇಶಿಕ ಬಲಾಬಲಗಳನ್ನು ಪರಿಗಣಿಸಬಹುದಾದರೂ ಮುಖ್ಯವಾಗಿ ಹಾಲಿ ಸಚಿವರು ಪ್ರತಿನಿಧಿಸುವ ಜಿಲ್ಲೆಗಳಿಂದ ಎಷ್ಟುಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ ಮತ್ತು ಅವರ ಆಯ್ಕೆಯಲ್ಲಿ ಸಚಿವರ ಪಾತ್ರವೇನು ಎಂಬುದನ್ನು ಆಧರಿಸಿ ನೀಡಬೇಕು.

ಪ್ರಸ್ತುತ ಜಿಲ್ಲೆಗಳಲ್ಲಿ ಇರುವ ಕಾಂಗ್ರೆಸ್‌ ಶಾಸಕರಿಗಿಂತ ಕನಿಷ್ಠ ಒಂದಾದರೂ ಹೆಚ್ಚು ಸ್ಥಾನವನ್ನು ಗೆಲ್ಲಿಸಿಕೊಂಡು ಬರಬೇಕು. ಹಾಲಿ ಸಂಖ್ಯೆಗಿಂತ ಕಡಿಮೆಯಾದರೆ ಪಕ್ಷ ಅಧಿಕಾರಕ್ಕೆ ಬಂದಾಗ ಸದರಿ ಜಿಲ್ಲೆಯ ಉಸ್ತುವಾರಿ ಸಚಿವ ಹಿರಿತನ ಹೊಂದಿದ್ದರೂ ಪ್ರಭಾವಿಯಾಗಿದ್ದರೂ ಅವರನ್ನು ಪರಿಗಣಿಸಲಾಗುವುದಿಲ್ಲ. ಈ ಸಂದೇಶ ಸ್ಪಷ್ಟವಾಗಿ ಉಸ್ತುವಾರಿ ಸಚಿವರಿಗೆ ನೀಡಿ ಎಂದು ರಾಹುಲ್‌ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

loader