4 ಎಂಎಲ್‌ಸಿ ಸ್ಥಾನಗಳಿಗೆ ಕಾಂಗ್ರೆಸ್ ಹೆಸರು ಫೈನಲ್

Congress Finalised 4 MLC Post
Highlights

ವಿಧಾನಸಭೆಯಿಂದ ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅರ್ಹರ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಆಖೈರುಗೊಳಿಸಿದೆ ಎನ್ನಲಾಗಿದೆ.

ಬೆಂಗಳೂರು :  ವಿಧಾನಸಭೆಯಿಂದ ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅರ್ಹರ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಆಖೈರುಗೊಳಿಸಿದೆ ಎನ್ನಲಾಗಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ ನಾಲ್ವರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ. ಈ ಮೂಲಗಳ ಪ್ರಕಾರ ಕಳೆದ ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಕೆ.ಗೋವಿಂದರಾಜ್ ಅವರು ಈ ಬಾರಿಯೂ ಮುಂದುವರೆಯುವುದು ಖಚಿತ ಎನ್ನಲಾಗಿದೆ. 

ಇನ್ನು ಮುಸ್ಲಿಮರಿಂದ  (ಸಿ.ಎಂ.ಇಬ್ರಾಹಿಂ) ತೆರವಾಗಿರುವ ಸ್ಥಾನ ಮುಸ್ಲಿಮರಿಗೇ ದೊರೆಯಲಿದೆ. ಹೀಗಾಗಿ ಸಿ.ಎಂ. ಇಬ್ರಾಹಿಂ ಪುನರಾಯ್ಕೆ ಬಯಸಿ ದ್ದಾರೆ. ಆದರೆ, ಕಾಂಗ್ರೆಸ್‌ನ ಒಂದು ವರ್ಗ ನಜೀರ್ ಅಹಮದ್ ಅವರಿಗಾಗಿ ತೀವ್ರ ಲಾಬಿ ನಡೆಸಿದೆ. ಈ ಇಬ್ಬರ ಪೈಕಿ ಒಬ್ಬರಿಗೆ ಸ್ಥಾನ ದೊರೆಯುವ ಸಾಧ್ಯತೆಯಿದೆ.  ಶಾಸಕ ಬೈರತಿ ಸುರೇಶ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಮಾಜಿ ಮೇಯರ್ ರಾಮಚಂದ್ರಪ್ಪ ಹಾಗೂ ವಿ.ಆರ್. ಸುದರ್ಶನ್ ನಡುವೆ ಪೈಪೋಟಿಯಿದೆ. 

ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬ ದೃಷ್ಟಿಯಿಂದ ನೋಡಿದರೆ ರಾಮಚಂದ್ರಪ್ಪ ಅವರಿಗೆ ಸ್ಥಾನ ದೊರೆಯಬೇಕು. ಇದೇ ವೇಳೆ  ವಿ.ಆರ್.ಸುದರ್ಶನ್ ಸಹ ಲಾಬಿ ನಡೆಸುತ್ತಿದ್ದಾರೆ. ಇನ್ನು ಮಹಿಳೆಯರ ಕೋಟಾ (ಮೋಟಮ್ಮ ಅವರಿಂದ ತೆರವಾದ ಸ್ಥಾನ)ಕ್ಕೆ ಮಹಿಳೆ ಯರನ್ನೇ ತರುವ ಸಾಧ್ಯತೆ ಹೆಚ್ಚಿದೆ. ಈ ಸ್ಥಾನಕ್ಕೆ ರಾಣಿ ಸತೀಶ್ ತೀವ್ರ ಪೈಪೋಟಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

loader