ಕೋಲಾರ,[ಆ.29]:  ಜೆಡಿಎಸ್ ನಲ್ಲಿ ಅಧಿಕಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದವರು. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಕಟ್ಟಿಲ್ಲ. ಕಾಂಗ್ರೆಸ್ ಕಟ್ಟಿದ್ದು ನಾವು ಎಂದು ಸಿದ್ದರಾಮಯ್ಯ ವಿರುದ್ಧವೇ  ವಾಗ್ದಾಳಿ ನಡೆಸಿದರು.

ಕೋಲಾದರಲ್ಲಿ ಇಂದು [ಗುರುವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಟಿ.ಬಿ, ಆಡಳಿತ ಅಧಿಕಾರ ವೈಪಲ್ಯಗಳಿಂದ ಬೇಸತ್ತು ಹೊರಗೆ ಬಂದಿದ್ದೇವೆ.  ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಏನು ಮಾಡಲಾಗುತ್ತಿಲ್ಲ.  ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತಟ್ಟಲಿ ತೊಡೆ. ಇಂತಹ ತೊಡೆ ತಟ್ಟುವರನ್ನ ನಾನು ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.

ನಮ್ಮ ಮನೆಗೆ ಬಂದು ವಾಸ ಮಾಡಿ ಸಂಸಾರ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಎಂಟಿಬಿ, ಮೈತ್ರಿ ಸರ್ಕಾರ ಬೀಳಲು ದೇವೇಗೌಡ ಮತ್ತು ಸಿದ್ದರಾಮಯ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ಕುಮಾರಸ್ವಾಮಿ, ರೇವಣ್ಣ ನನ್ನ ವಸತಿ ಖಾತೆಯಲ್ಲಿ ಮೂಗು ತೂರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜಿನಾಮೆ ನೀಡುತ್ತೇನೆ ಎಂದು ಮೂರು ಬಾರಿ ಸಿದ್ದರಾಮಯ್ಯಗೆ ಹೇಳಿದ್ದೆ. ಕೊನೆಯದಾಗಿ ಎರಡು ಉದ್ದೇಶಗಳಿವೆ ಒಂದು ರಾಜಕೀಯ ನಿವೃತ್ತಿ,. ಇನ್ನೊಂದು ನನಗೆ ಯಾರ ಹಂಗೂ ಬೇಡ ಕಾರ್ಯಕರ್ತರ ಅಭಿಪ್ರಾಯದಿಂದ ಸ್ವತಂತ್ರವಾಗಿ ಸ್ಪರ್ದೆ ಮಾಡಲು ನಿರ್ಧರಿಸುತ್ತೇನೆ ಎಂದರು.