ನವದೆಹಲಿ(ಸೆ.13): ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ, ದೇಶ ಬಿಡುವುದಕ್ಕೂ ಮೊದಲು ತಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದಾನೆ.

ಮಲ್ಯ ಈ ಹೇಳಿಕೆ ನವದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದು, ಮಲ್ಯ ದೇಶ ಬಿಡಲು ಸಹಾಯ ಮಾಡಿದ ಅರುಣ್ ಜೇಟ್ಲಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಲ್ಯ ಮತ್ತು ಅರುಣ್ ಜೇಟ್ಲಿ ನಡುವೆ ಸಂಸತ್ ನಲ್ಲಿ ಮಾತುಕತೆಯಾಗಿದ್ದು, ಮಲ್ಯ ದೇಶ ಬಿಡುವುದಕ್ಕೆ ಜೇಟ್ಲಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಸ್ಥಾನದ ದುರ್ಬಳಕೆ ಮಾಡಿಕೊಂಡಿರುವ ಜೇಟ್ಲಿ ಕೂಡಲೇ ರಾಜೀನಾಮೆ ನೀಡಬೇಕೆಂದು ರಾಹುಲ್ ಆಗ್ರಹಿಸಿದ್ದಾರೆ.

ಈ ಮಧ್ಯೆ ಮಲ್ಯ ದೇಶ ಬಿಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ಸಹಾಯ ಮಾಡಿದ್ದಾರೆ ಎಂಬರ್ಥದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಮಾತನಾಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಲ್ಯ ಬಂಧನಕ್ಕೆ ಸಿಬಿಐ ನೋಟೀಸ್ ಜಾರಿ ಮಾಡಿದ್ದರೂ ಆತ ದೇಶ ಬಿಟ್ಟು ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸಿಬಿಐ ನೋಟೀಸ್ ಹೊರತಾಗಿಯೂ ವಿಮಾನ ನಿಲ್ದಾಣದ ಅಧಿಕಾರಿಗಳು ಮಲ್ಯ ಅವರನ್ನು ದೇಶ ಬಿಡಲು ಅನುವು ಮಾಡಿಕೊಟ್ಟಿದ್ದರ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡ ಇದೆ ಎಂದು ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.