ಪ್ರಧಾನಿ ನರೇಂದ್ರ ಮೋದಿ ಹೆಸರು ನಮೂದಾಗಿತ್ತು ಎನ್ನಲಾದ ಸಹಾರಾ-ಬಿರ್ಲಾ ಡೈರಿ, ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿದ ಕುರಿತಂತೆ ಬಿ.ಎಸ್‌.ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್‌ ನಡುವಣ ಸಂಭಾಷಣೆ ಮತ್ತು ಗೋವಿಂದರಾಜು ಅವರಿಗೆ ಸಂಬಂಧಿಸಿದ್ದು ಎನ್ನಲಾದ ಡೈರಿ ಕುರಿತಂತೆ ಸುಪ್ರಿಂಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಿ ಎಂದು ಕಾಂಗ್ರೆಸ್‌ ಪಕ್ಷ ಆಗ್ರಹಿಸಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೆಸರು ನಮೂದಾಗಿತ್ತು ಎನ್ನಲಾದ ಸಹಾರಾ-ಬಿರ್ಲಾ ಡೈರಿ, ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿದ ಕುರಿತಂತೆ ಬಿ.ಎಸ್‌.ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್‌ ನಡುವಣ ಸಂಭಾಷಣೆ ಮತ್ತು ಗೋವಿಂದರಾಜು ಅವರಿಗೆ ಸಂಬಂಧಿಸಿದ್ದು ಎನ್ನಲಾದ ಡೈರಿ ಕುರಿತಂತೆ ಸುಪ್ರಿಂಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಿ ಎಂದು ಕಾಂಗ್ರೆಸ್‌ ಪಕ್ಷ ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ, ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರಿಂದ ಉತ್ತುಂಗಕ್ಕೇರಿರುವ ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸದೇ ರಾಜಕೀಯ ಷಡ್ಯಂತ್ರಕ್ಕಾಗಿ ಮೇಲ್ಮನೆ ಸದಸ್ಯ ಕೆ.ಗೋವಿಂದರಾಜು ಅವರಿಗೆ ಸೇರಿದ ಡೈರಿ ಎಂಬುದಾಗಿ ಕೆಲ ನಿರ್ದಿಷ್ಟಮಾಧ್ಯಮಗಳು ಬಿಂಬಿಸುತ್ತಿವೆ.

ನಿನ್ನೆ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಕಟವಾದ ಸುದ್ದಿ ಸಂಪೂರ್ಣ ಸುಳ್ಳು ಎಂದು ಅವರು ಸಮರ್ಥಿಸಿಕೊಂಡರು. ಆದಾಯ ತೆರಿಗೆ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಮಾಹಿತಿಯನ್ನು ನೀಡಲು ಅವಕಾಶ ಇಲ್ಲ. ಆದಾಗ್ಯೂ ಗೋವಿಂದರಾಜು ಅವರ ನಿವಾಸದ ಮೇಲೆ ನಡೆದ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿಯಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧದ ಸಾಕ್ಷ್ಯಗಳಿವೆ ಎಂಬುದಾಗಿ ಮಾಧ್ಯಮಗಳು ಬಿತ್ತರಿಸುತ್ತಿವೆ. ಸ್ವತಃ ಗೋವಿಂದರಾಜು ಅವರು ತಮಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಐಟಿ ವಶಪಡಿಸಿಕೊಂಡಿಲ್ಲ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ದಾಖಲೆಗಳು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ಆ ಹೇಳಿಕೆಯೇ ಬೇರೆ, ಇದೇ ಬೇರೆ:

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆ ವೇಳೆ ತಾವು ಹೇಳಿದ್ದೇ ಬೇರೆ. ಆದರೆ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವುದೇ ಬೇರೆ ಎಂದು ವಿಧಾನಪರಿಷತ್‌ ಸದಸ್ಯ ಕೆ. ಗೋವಿಂದರಾಜು ಸ್ಪಷ್ಟಪಡಿಸಿದ್ದಾರೆ.
ಐಟಿ ದಾಳಿಗೆ ಸಂಬಂಧಿಸಿದಂತೆ ಯಾವುದೇ ಡೈರಿಯನ್ನು ನನ್ನಿಂದ ವಶಪಡಿಸಿಕೊಂಡಿಲ್ಲ. ಈ ಕುರಿತಂತೆ ವಿಧಿವಿಜ್ಞಾನ ಪ್ರಯೋಗಾಲಯದಿಂದ ಡೈರಿ ಸತ್ಯಾಸತ್ಯತೆಯ ಬಗ್ಗೆ ತನಿಖೆಯಾಗಲಿ ಎಂದೂ ಐಟಿ ಇಲಾಖೆಗೆ ಕೋರಿದ್ದೇನೆ. ಆದಾಗ್ಯೂ ನಕಲಿ ದಾಖಲೆಗಳನ್ನು ತೋರಿಸಿ ತಮ್ಮ ವಿರುದ್ಧ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಈ ಕುರಿತು ಮತ್ತೊಂದು ಮಾನನಷ್ಟಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ. ಹೀಗಾಗಿ ಈ ಬಗೆಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ನಾನು ಹಿಂದೆಯೂ ಡೈರಿ ಹಾಗೂ ಅದರಲ್ಲಿರುವ ವಿವರಗಳು ನನಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಆದಾಗ್ಯೂ ನಿರ್ದಿಷ್ಟಮಾಧ್ಯಮ ಸಮೂಹಗಳು ನನ್ನ ಮೇಲೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ನಿನ್ನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರದರ್ಶಿಸಿದ ದಾಖಲೆಗಳು ‘ಕಟ್‌ ಆಂಡ್‌ ಪೇಸ್ಟ್‌' ಮಾಡಿದ ನಕಲಿ ದಾಖಲೆಗಳು ಎಂದು ಸ್ಪಷ್ಟಪಡಿಸಿದರು. 2016ರ ಮೇ 3ರಂದು ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದೆ. ಅದನ್ನು ತಿರುಚಿ ವರದಿ ಮಾಡಲಾಗುತ್ತಿದೆ. ನಾನು ತೆರಿಗೆ ಅಧಿಕಾರಿಗಳಿಗೆ ಎಕೆಜಿ-9 ಎಂದು ನೀಡಿದ್ದ ಹೇಳಿಕೆಯನ್ನು ಎಕೆಜಿ- 3 ಎಂದು ತೋರಿಸಲಾಗುತ್ತಿದೆ. ‘ನನ್ನ ಮನೆಯ ಮಲಗುವ ಕೋಣೆಯಲ್ಲಿ ದೊರಕಿದೆ ಎಂದು ಹೇಳುತ್ತಿರುವ ಡೈರಿ ನನ್ನದಲ್ಲ. ಹೀಗಾಗಿ ಅದನ್ನು ಆಧರಿಸಿ ಕೇಳುತ್ತಿರುವ ಪ್ರಶ್ನೆಯೇ ಆಧಾರರಹಿತ. ತಾವು ಪ್ರಶ್ನೆಯಲ್ಲಿ ಕೇಳುತ್ತಿರುವ ನಾಯಕರು ಕಾಂಗ್ರೆಸ್ಸಿನ ಉನ್ನತ ಹಾಗೂ ಗೌರವಾನ್ವಿತ ನಾಯಕರು. ಹೀಗಾಗಿ ಆ ನಾಯಕರ ಹೆಸರನ್ನು ಉಲ್ಲೇಖಿಸಬೇಡಿ. ಅದನ್ನು ನಾನು ಖಂಡಿಸುತ್ತೇನೆ' ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ‘ಗೌರವಾನ್ವಿತ ನಾಯಕರು' ಎಂದಿದ್ದಷ್ಟನ್ನೇ ಕಟ್‌ ಮಾಡಿ ಅಪೂರ್ಣ ಅಂಶಗಳನ್ನು ತೋರಿಸುವ ಮೂಲಕ ಮಾಧ್ಯಮಗಳು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದ್ದಾರೆ.