ನವದೆಹಲಿ/ಹೈದ್ರಾಬಾದ್‌[ಜೂ.28] : ಬಿಜೆಪಿ ವಿರುದ್ಧ ಒಂದಾಗಿ ಹೋರಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷಗಳು ತೃಣಮೂಲ ಕಾಂಗ್ರೆಸ್‌ ಜೊತೆ ಕೈಜೋಡಿಸಬೇಕೆಂಬ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಆಹ್ವಾನವನ್ನು ಎರಡೂ ಪಕ್ಷಗಳು ಅನುಮಾನದಿಂದ ನೋಡಿವೆ.

ಮಮತಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂನ ಹಿರಿಯ ನಾಯಕ ಸುಧಾಕರ್‌ ರೆಡ್ಡಿ, ‘ಇದೊಂದು ಅರ್ಥಹೀನ ಮನವಿ. ಅವರು ನಮ್ಮನ್ನು ರಾಜಕೀಯ ಪ್ರತಿಸ್ಪರ್ಧಿ ಎಂಬುದರ ಬದಲಾಗಿ ಶತ್ರುಗಳು ಎಂದು ಪರಿಗಣಿಸಿದ್ದಾರೆ. ನಮ್ಮ ನೂರಾರು ಕಚೇರಿಗಳನ್ನೂ ಈಗಲೇ ಟಿಎಂಸಿ ಆಕ್ರಮಿಸಿಕೊಂಡಿದೆ. ನಮ್ಮ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಸಾವಿರಾರು ಜನರನ್ನು ಅವರ ಗ್ರಾಮಗಳಿಂದ ಹೊರಹಾಕಲಾಗಿದೆ. ಹೀಗಿದ್ದೂ ಅವರು ನಮ್ಮನ್ನು ಮೈತ್ರಿಗೆ ಹೇಗೆ ಆಹ್ವಾನಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಮತಾ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಮಮತಾ ತಮ್ಮ ಮನವಿ ಬಗ್ಗೆ ನಿಜವಾಗಿಯೂ ಗಂಭೀರವಾಗಿದ್ದಾರೆಯೇ? ಅವರು ನಿಜವಾಗಿಯೂ ಗಂಭೀರವಾಗಿದ್ದರೆ, ನಾವು ಈ ವಿಷಯದಲ್ಲಿ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾರೆ.