Asianet Suvarna News Asianet Suvarna News

ಬ್ಲೂಟೂತ್ ಜತೆ ಮತಯಂತ್ರ ಸಂಪರ್ಕ?

  • ಗುಜರಾತ್‌ನಲ್ಲಿ ಮತಯಂತ್ರ ತಿರುಚಿ ಅಕ್ರಮ: ಕಾಂಗ್ರೆಸ್ ದೂರು
  • ಆರೋಪ ಸುಳ್ಳು: ಚು. ಆಯೋಗ
Congress Complains EVM Rigging in Gujarat Elections

ಅಹಮದಾಬಾದ್: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವೇ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಕಾಂಗ್ರೆಸ್ ಸಂದೇಹ ವ್ಯಕ್ತಪಡಿಸಿದೆ.

ಪೋರ್‌ಬಂದರ್‌ನಲ್ಲಿರುವ ಮುಸ್ಲಿಂ ಬಾಹುಳ್ಯದ ಪ್ರದೇಶದ ಮೂರು ಮತಗಟ್ಟೆಗಳಲ್ಲಿ ಮತದಾನಕ್ಕೆ ಇಡಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳು (ಇವಿರಂ) ಮೊಬೈಲ್ ಬ್ಲೂಟೂತ್ ಜತೆ ಸಂಪರ್ಕ ಸಾಧಿಸಿವೆ ಎಂದು ಆರೋಪ ಮಾಡಿದೆ.

ಈ ಕುರಿತು ಹಿರಿಯ ಕಾಂಗ್ರೆಸ್ಸಿಗ ಅರ್ಜುನ್ ಮೋಧ್ವಾಡಿಯಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಆಯೋಗ, ‘ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ವಿಚಾರಣೆ ನಂತರ ಗೊತ್ತಾಗಿದೆ’ ಎಂದು ಹೇಳಿದೆ.

ಈ ನಡುವೆ, ಚುನಾವಣೆಯಲ್ಲಿ ಸೋಲು ಗ್ಯಾರಂಟಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೆಪ ಹುಡುಕುತ್ತಿದೆ. ಮತಯಂತ್ರದ ಹಿಂದೆ ಅಡಗಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.

ಆರೋಪ ಏನು?: ಪೋರ್‌ಬಂದರ್‌ನಲ್ಲಿರುವ ಮುಸ್ಲಿಂ ಪ್ರಭಾವ ಹೆಚ್ಚಿರುವ ಮೇವನ್‌ವಾಡಾದ ಮೂರು ಮತಗಟ್ಟೆಗಳಲ್ಲಿ ಅಳವಡಿಕೆ ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳು ಬ್ಲೂಟೂತ್‌ನಂತಹ ಬಾಹ್ಯಸಾಧನದ ಜತೆ ಕನೆಕ್ಟ್ ಆಗಿವೆ. ಮತಗಟ್ಟೆ ಬಳಿ ಮೊಬೈಲ್ ಫೋನ್ ನಲ್ಲಿ ಬ್ಲೂಟೂತ್ ಆನ್ ಮಾಡಿದಾಗ ‘ಇಸಿಒ 105’ ಎಂಬ ಉಪಕರಣ ಪತ್ತೆಯಾಗಿದೆ. ಬ್ಲೂಟೂತ್ ಮೂಲಕ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಬಹುದು ಎಂದು ಇದರಿಂದ ಸ್ಪಷ್ಟವಾಗಿ ಸಾಬೀತಾಗಿದೆ.

ಬ್ಲೂಟೂತ್ ಮೂಲಕ ಮತಯಂತ್ರಗಳಲ್ಲಿರುವ ಚಿಪ್’ಗಳ ಕಾರ್ಯವಿಧಾನ ಬಲದಿಸಬಹುದು. ಹೀಗಾಗಿ ಮತಯಂತ್ರ ತಿರುಚುವ ಸಾಧ್ಯತೆ ಇದ್ದೇ ಇದೆ ಎಂದು ಪೋರ್‌ಬಂದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಮೋಧ್ವಾದಿಯಾ ವಿವರಿಸಿದ್ದಾರೆ.

‘ಮೋಧ್ವಾಡಿಯಾ ದೂರು ನೀಡುತ್ತಿದ್ದಂತೆ ಚುನಾವಣಾ ತನಿಖೆ ನಡೆಸಿದ್ದೇವೆ. ‘ಇಸಿಒ 105 ಎಂಬುದು ಮತಯಂತ್ರದ ಬ್ಲೂಟೂತ್ ಸಂಖ್ಯೆ ಅಲ್ಲ. ಬದಲಾಗಿ, ಅದು ಚುನಾವಣಾ ಸಿಬ್ಬಂದಿಯೊಬ್ಬರ ಮೊಬೈಲ್ ನ ಬ್ಲೂಟೂತ್ ಸಂಖ್ಯೆ’ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಈ ಮಧ್ಯೆ, ಮೊದಲ ಹಂತದಲ್ಲಿ ಮತದಾನ ನಡೆದ 24 ಸಾವಿರ ಮತಗಟ್ಟೆಗಳ ಪೈಕಿ ಏಳೆಂಟು ಬೂತ್‌ಗಳಲ್ಲಿನ ಮತಯಂತ್ರಗಳಲ್ಲಿ ಸಮಸ್ಯೆ ಕಂಡುಬಂದಿತ್ತು. ಅದನ್ನು ಸರಿಪಡಿಸಲಾಯಿತು ಎಂದು ಆಯೋಗ ಮಾಹಿತಿ ನೀಡಿದೆ. ಉತ್ತರಪ್ರದೇಶ ವಿಧಾನಸಭೆ ಹಾಗೂ ಪೌರ ಸಂಸ್ಥೆ ಚುನಾವಣೆಯಲ್ಲಿ ಮತಯಂತ್ರ ತಿರುಚಲಾಗಿತ್ತು ಎಂಬ ಆರೋಪವನ್ನು ವಿಪಕ್ಷಗಳು ಮಾಡಿದ್ದವು.

Follow Us:
Download App:
  • android
  • ios