ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳ ನಿರಾಸಕ್ತಿ | ಕೈ ಪಾಳಯದಲ್ಲಿ ಶುರುವಾಗಿದೆ ಗೊಂದಲ | ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ಕ್ರಮ ಗೊಳ್ಳಲು ಕೆಪಿಸಿಸಿ ನಿರ್ಧಾರ

ಬೆಂಗಳೂರು (ಅ. 12): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಜೆಡಿಎಸ್-ಕಾಂಗ್ರೆಸ್ ನಾಯಕರು ಸೇರಿ ತೀರ್ಮಾನ ತೆಗೆದುಕೊಂಡಿದ್ದೇವೆ. ಇನ್ನು ಮುಂದೆ ಏನಾದರೂ ರಾಜಕೀಯ ಬೆಳವಣಿಗೆಗಳು ನಡೆದರೆ ಅದನ್ನು ಆಧರಿಸಿ ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಜೆಡಿಎಸ್‌ನ ಮಧು ಬಂಗಾರಪ್ಪ ಅವರ ಹೆಸರು ಚರ್ಚೆಯ ವೇಳೆ ಪ್ರಸ್ತಾಪವಾಗಿತ್ತು. ಆದರೆ, ಉಭಯ ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕೆ ಇಳಿಸಲು ನಿರ್ಧರಿಸಿದ್ದೆವು. ಜೆಡಿಎಸ್‌ನ ಮಧು ಬಂಗಾರಪ್ಪ ಅವರು ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಹಿಂತಿರುಗಿದ ನಂತರ ಮುಂದೇನಾದರೂ ರಾಜಕೀಯ ಬೆಳವಣಿಗೆ ನಡೆದರೆ ಅದನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಧು ಬಂಗಾರಪ್ಪ ಸ್ಪರ್ಧಿಸಲು ಒಪ್ಪಿದರೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುವುದೇ ಎಂಬ ಪ್ರಶ್ನೆಗೆ, ನಾನು ಆ ರೀತಿ ಏನೂ ಹೇಳುತ್ತಿಲ್ಲ. ರಾಜಕಾರಣದಲ್ಲಿ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಆ ಬೆಳವಣಿಗೆ ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಷ್ಟೇ ಹೇಳಿದ್ದೇನೆ. ವಾಸ್ತವವಾಗಿ ಶಿವಮೊಗ್ಗ ಸಾಂಪ್ರದಾಯಿಕವಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿಯಿರುವ ಕ್ಷೇತ್ರ. ಇನ್ನು ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ಸಂಖ್ಯೆಯಲ್ಲಿ ಮತದಾರರು, ಕಾರ್ಯಕರ್ತರು, ಜನಪ್ರತಿನಿಧಿಗಳು ಇದ್ದಾರೆ ಎಂದರು.

ಸ್ಪರ್ಧಿಸಲು ಯಾರೂ ಹಿಂಜರಿಯುತ್ತಿಲ್ಲ:

ಕೇವಲ ನಾಲ್ಕು ತಿಂಗಳ ಅವಧಿ ಇರುವ ಕಾರಣಕ್ಕೆ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ. ಹಾಗಂತ ಯಾರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಲ್ಲ. ಪಕ್ಷ ಹೇಳಿದರೆ ಅವರು ಸ್ಪರ್ಧೆ ಮಾಡಲೇಬೇಕಾಗುತ್ತದೆ. ಆದರೆ, ಈ ಚುನಾವಣೆ ಅನಗತ್ಯವಾಗಿತ್ತು ಎಂಬ ಭಾವನೆ ಈ ಕ್ಷೇತ್ರಗಳ ಆಕಾಂಕ್ಷಿಗಳಲ್ಲಿ ಇದೆ. ಹಾಗಂತ ಕಾಂಗ್ರೆಸ್‌ನಿಂದ ಯಾರೂ ಸ್ಪರ್ಧಿಸಲು ಮುಂದಾಗುತ್ತಿಲ್ಲ, ಗೊಂದಲವಿದೆ ಎಂಬುದೆಲ್ಲ ನಿಜವಲ್ಲ ಎಂದು ಅವರು ಹೇಳಿದರು.