ರಾಜ್ಯ ವಿಧಾನಸಭೆಯ ಎಲ್ಲ 224 ಕ್ಷೇತ್ರಗಳಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಏ.10ರೊಳಗೆ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ನವದೆಹಲಿ : ರಾಜ್ಯ ವಿಧಾನಸಭೆಯ ಎಲ್ಲ 224 ಕ್ಷೇತ್ರಗಳಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಏ.10ರೊಳಗೆ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಳೆದ ಬಾರಿ ಕಾಂಗ್ರೆಸ್‌ ಸೋತ ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್‌ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಮಾ.26 ರಂದು ಹಾಲಿ ಶಾಸಕರಿರುವ ಕ್ಷೇತ್ರಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಚುನಾವಣಾ ದಿನಾಂಕ ಘೋಷಣೆ ಆಗಲಿ, ಬಿಡಲಿ ಏ.10ರೊಳಗೆ ಎಲ್ಲ ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಲಿದೆ. ಜಿಲ್ಲಾ ಕಾಂಗ್ರೆಸ್‌ನಿಂದ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ನಮ್ಮ ಕೈ ಸೇರಿದೆ ಎಂದು ಖಚಿತ ಧ್ವನಿಯಲ್ಲಿ ಹೇಳಿದರು.

ಈ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಗೆಲ್ಲುವ ಸಾಮರ್ಥ್ಯವೇ ಮಾನದಂಡವಾಗಲಿದೆ. ಹಾಗೆಂದು ಸಾಮಾಜಿಕ ನ್ಯಾಯವನ್ನು ತಳ್ಳಿಹಾಕಲಾಗುವುದಿಲ್ಲ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯಗಳೂ ಮುಖ್ಯವೇ. ಆದರೆ ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಮಾತ್ರ ಕಾಂಗ್ರೆಸ್‌ ಟಿಕೆಟ್‌ ನೀಡಲಾಗುವುದು. ಮಂತ್ರಿಗಳು, ಹಿರಿಯ ನಾಯಕರ ಮಕ್ಕಳಿಗೆ ಗೆಲ್ಲುವ ಅವಕಾಶಗಳಿದ್ದರೆ ಖಂಡಿತ ಟಿಕೆಟ್‌ ನೀಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಗೆ ಹೆಚ್ಚೆಂದರೆ 60 ರಿಂದ 70 ಸೀಟ್‌ ಸಿಗಬಹುದಷ್ಟೆ. ಜೆಡಿಎಸ್‌ ಕೂಡ ಹೆಚ್ಚಿನ ಸಾಧನೆ ಮಾಡುವುದಿಲ್ಲ, ಹೈ-ಕ, ಉತ್ತರ ಕರ್ನಾಟಕ ಭಾಗಗಳಲ್ಲಿ ಆ ಪಕ್ಷಕ್ಕೆ ನೆಲೆಯೇ ಇಲ್ಲ. ನಮ್ಮಿಂದ ಟಿಕೆಟ್‌ ಸಿಗದ ನಾಯಕರಿಗೆ ಟಿಕೆಟ್‌ ನೀಡಿ ಅವರನ್ನು ಗೆಲ್ಲಿಸುವ ಜೆಡಿಎಸ್‌ ಕಾರ್ಯತಂತ್ರ ಫಲಿಸುವುದಿಲ್ಲ. ಏಕೆಂದರೆ ನಾವೇ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾಯಾವತಿ ಅವರು ದೊಡ್ಡ ನಾಯಕರಿರಬಹುದು. ಆದರೆ ಕರ್ನಾಟಕದಲ್ಲಿ ಅವರಿಗೆ ಬೆಂಬಲವಿಲ್ಲ. ಆದ್ದರಿಂದ ಜೆಡಿಎಸ್‌, ಬಿಎಸ್ಪಿ ಮೈತ್ರಿ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್‌ ಟಿಕೆಟ್‌ ಬಗ್ಗೆ ಮೂರು ಸಮೀಕ್ಷೆ ನಡೆಸಿದ್ದೇನೆ, ಎರಡು ಸಮೀಕ್ಷೆಗಳ ವರದಿ ಈಗಾಗಲೇ ನನ್ನ ಕೈಸೇರಿದೆ. ಮೂರನೇ ಸಮೀಕ್ಷೆಯ ವರದಿ ಕೈ ಏಪ್ರಿಲ… ಮೊದಲ ವಾರದಲ್ಲಿ ನನ್ನ ಕೈಸೇರಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. 

ಬಿಜೆಪಿ ನಾಯಕರು ಸುಳ್ಳು ಹೇಳುತ್ತಾರೆ, ಅದಕ್ಕೆ ಟೀಕಿಸುತ್ತೇನೆ ನೀವು ಬಿಜೆಪಿ ನಾಯಕರನ್ನು ತೀರಾ ಕೆಳಮಟ್ಟದಲ್ಲಿ ಟೀಕಿಸುತ್ತೀರಿ ಅಲ್ಲವೇ ಎಂಬ ಪ್ರಶ್ನೆಗೆ, ಜಗದೀಶ್‌ ಶೆಟ್ಟರ್‌, ಈಶ್ವರಪ್ಪ, ಯಡಿಯೂರಪ್ಪ ಅವರು ತೀರಾ ಸುಳ್ಳು ಹೇಳುತ್ತಾರೆ. ಅವರು ತಮ್ಮ ಮಾತಿಗೆ ಬದ್ಧತೆ ತೋರುತ್ತಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಾರೆ.

ಈ ಆರೋಪಗಳಿಗೆ ದಾಖಲೆಯೇ ಇರುವುದಿಲ್ಲ. ನಾನು ಪ್ರತಿಪಕ್ಷದ ನಾಯಕನಾಗಿದ್ದಾಗ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ತಮ್ಮ ನಿಲುವು ಸಮರ್ಥಿಸಿಕೊಂಡರು. ಆರೆಸ್ಸೆಸ್‌ನವರು ಬುದ್ಧಿವಂತರು, ಅವರೇ ನಿರ್ದೇಶಕರು. ಬಿಜೆಪಿ ನಾಯಕರುಗಳೆಲ್ಲ ನಟರು. ಆದರೆ ನಿರ್ದೇಶಕರು ಹೇಳಿದಂತೆ ಈ ಬಿಜೆಪಿಯವರು ನಟಿಸುತ್ತಿಲ್ಲ ಎಂದು ಸಿಎಂ ಬಿಜೆಪಿ ನಾಯಕರನ್ನು ಲೇವಡಿ ಮಾಡಿದರು. ಸದಾಶಿವ ಆಯೋಗದ ಬಗ್ಗೆ ಸಚಿವ ಸಂಪುಟದ ಉಪ ಸಮಿತಿಗೆ ವರದಿ ನೀಡುವಂತೆ ಶಿಫಾರಸು ಮಾಡಿದ್ದೇವೆ. ಅವರು, ವರದಿ ನೀಡಿದ ಬಳಿಕ ಮುಂದಿನ ತೀರ್ಮಾನ ಎಂದು ಸಿಎಂ ಹೇಳಿದರು.

ಕರ್ನಾಟಕ ವಿಧಾನಸಭಾ ಚುನಾವಣೆ ಕೋಮುವಾದಿ ಮತ್ತು ಜಾತ್ಯತೀತತೆಯ ನಡುವಿನ ಕದನ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಾವು ಈ ಚುನಾವಣೆ ಎದುರಿಸಿ ಗೆಲುವು ಸಾಧಿಸಲಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಾವೇ ಗೆಲ್ಲಲಿದ್ದು, ರಾಹುಲ್‌ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ