Asianet Suvarna News Asianet Suvarna News

ಕಾಂಗ್ರೆಸ್ ಪಟ್ಟಿಯೂ ಫೈನಲ್ : ಯಾರಾಗುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಗಳು..?

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲು ಬುಧವಾರ ಇಡೀ ದಿನ ತೀವ್ರ ಕಸರತ್ತು ನಡೆಸಿದ ರಾಜ್ಯ ಕಾಂಗ್ರೆಸ್, ಸುಲಭವಾಗಿ ಗೆಲ್ಲಬಲ್ಲ ಕ್ಷೇತ್ರಗಳ ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸಿದೆ.

Congress Candidate List Ready

ಬೆಂಗಳೂರು : ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲು ಬುಧವಾರ ಇಡೀ ದಿನ ತೀವ್ರ ಕಸರತ್ತು ನಡೆಸಿದ ರಾಜ್ಯ ಕಾಂಗ್ರೆಸ್, ಸುಲಭವಾಗಿ ಗೆಲ್ಲಬಲ್ಲ ಕ್ಷೇತ್ರಗಳ ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸಿದೆ.

ಜತೆಗೆ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕ್ಷೇತ್ರಗಳ ಬಗ್ಗೆ ಸದ್ಯದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಲು ತೀರ್ಮಾನಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ದಿನವಿಡೀ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಆಕಾಂಕ್ಷಿಗಳ ಪಟ್ಟಿ ವರದಿಯನ್ನು ಪಡೆದರು.

ಈ ವೇಳೆ ಹಾಲಿ 122 ಕ್ಷೇತ್ರಗಳ ಶಾಸಕರ ಪೈಕಿ 70 ಕ್ಷೇತ್ರಗಳಿಗೆ ಹಾಲಿ ಶಾಸಕರನ್ನು ಹೊರತುಪಡಿಸಿ ಬೇರೊಬ್ಬರು ಟಿಕೆಟ್ ಬೇಡಿಕೆ ಇಟ್ಟಿಲ್ಲ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿಯಮ ಪಾಲಿಸದಿರಲು ನಿರ್ಧರಿಸಲಾಯಿತು. ಶಾಸಕರ ಸೋಲಿಗೆ ಉಸ್ತುವಾರಿ ಸಚಿವರೆ ಹೊಣೆ ಎಂದು ಈ ವೇಳೆ ಸಿದ್ದರಾಮಯ್ಯಎಚ್ಚರಿಸಿದರು.

ಕಳೆದ ಬಾರಿ ಸೋತಿರುವ ಕ್ಷೇತ್ರಗಳ ಪೈಕಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ ಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್, ಮಹದೇವಪುರ ಕ್ಷೇತ್ರದಿಂದ ಎ.ಸಿ. ಶ್ರೀನಿವಾಸ್ ಹಾಗೂ ಮೂಡಿಗೆರೆ ಕ್ಷೇತ್ರದಿಂದ ಮೋಟಮ್ಮ ಸೇರಿ ಹಲವು ಕ್ಷೇತ್ರಗಳಿಗೆ ಒಂದೇ ಅಭ್ಯರ್ಥಿಯ ಹೆಸರು ಅಂತಿಮಗೊಂಡಿದೆ. ಉಳಿದಂತೆ ಪ್ರಸ್ತುತ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಾಯಕ್ ಬದಲಿಗೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೀರಾನಾಯಕ್ ಅವರಿಗೆ ಟಿಕೇಟ್ ನೀಡುವ ಬಗ್ಗೆಯೂ ಚರ್ಚೆಯಾಗಿದೆ.

ಆದರೆ, ಬಂಡಾಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎರಡೂ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲು ನಿರ್ಧರಿಸಲಾಯಿತು. ಕಿತ್ತೂರಿನ ಶಾಸಕ ಡಿ.ಬಿ. ಇನಾಂದಾರ್ ಜತೆಗೆ ಡಾ. ಮಹಾಂತೇಶ್ ಚರಂತಿಮಠ, ಬಳ್ಳಾರಿ ನಗರದಲ್ಲಿ ಶಾಸಕ ಅನಿಲ್‌ಲಾಡ್ ಜತೆಗೆ ಸೂರ್ಯನಾರಾಯಣರೆಡ್ಡಿ, ಹನುಮೇಶ್‌ಬಾಬು, ಹೂವಿನ ಹಡಗಲಿ ಕ್ಷೇತ್ರದಲ್ಲಿ ಪಿ.ಟಿ. ಪರಮೇಶ್ವರ್ ನಾಯಕ್ ಜತೆಗೆ ಕೃಷ್ಣ ನಾಯಕ್ ಹೆಸರು ಶಿಫಾರಸಿಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ನಾಯಕರ ಸಂಬಂಧಿಕರು: ಸಚಿವ ಟಿ.ಬಿ. ಜಯಚಂದ್ರ ಪುತ್ರನಿಗೆ ಚಿಕ್ಕನಾಯಕನಹಳ್ಳಿ, ಕೆ. ಎನ್. ರಾಜಣ್ಣ ಪುತ್ರ ರಾಜೇಂದ್ರಗೆ ತುಮಕೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ ಪುತ್ರಿಗೆ ಜಯನಗರ, ಕೆಜಿಎಫ್ ಕ್ಷೇತ್ರಕ್ಕೆ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿ. ನರಸೀಪುರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರಗೆ ವರುಣಾ ಕ್ಷೇತ್ರಕ್ಕೆ ಟಿಕೆಟ್ ನೀಡಲು ಶಿಫಾರಸು ಮಾಡಲು ಉದ್ದೇಶಿಸಿಸಲಾಗಿದೆ. ಸಭೆಯಲ್ಲಿ ಬೀದರ್ ಜಿಲ್ಲೆಯ ಚರ್ಚೆ ವೇಳೆ ಅಶೋಕ್ ಖೇಣಿಗೆ ಟಿಕೆಟ್ ನೀಡುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಚಿಂತಾಮಣಿಯಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಸಜ್ಜಾಗಿರುವ ಡಾ.ಸುಧಾಕರ್‌ರೆಡ್ಡಿ ಬಗ್ಗೆ ಕೂಡ ಚರ್ಚೆ ನಡೆದಿದೆ.

Follow Us:
Download App:
  • android
  • ios