ಬೆಂಗಳೂರು [ಜು.24]: ರಾಜಧಾನಿಯ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನಿತೇಶ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಇಬ್ಬರು ಪಕ್ಷೇತರು ಇದ್ದಾರೆನ್ನಲಾದ ವಿಷಯ ತಿಳಿದು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಸ್ಪರ ಘೋಷಣೆ ಕೂಗುತ್ತಾ ಕೈಮಿಲಾಯಿಸುವ ಹಂತಕ್ಕೆ ತಲುಪಿ ಹೈಡ್ರಾಮಾ ಸೃಷ್ಟಿಸಿದ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆಯಿತು.

ಒಂದು ಹಂತದಲ್ಲಿ ಎರಡು ಪಕ್ಷದ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಎರಡು ಪಕ್ಷದ ಕಾರ್ಯಕರ್ತರು ಸ್ಥಳದಿಂದ ತೆರಳಲು ನಿರಾಕರಿಸಿದ ಪರಿಣಾಮ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಮತ ಯಾಚನೆ ಮೇಲಿನ ಚರ್ಚೆ ವೇಳೆ ಸಂಜೆ ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಮತ್ತು ನಾಗೇಶ್‌ ಅವರು ಸದನಕ್ಕೆ ಬರಲಿದ್ದು, ಇಬ್ಬರು ಶಾಸಕರು ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನಿತೇಶ್‌ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ ಎಂಬ ವಿಷಯ ಹರಡಿತ್ತು. ವಿಷಯ ತಿಳಿದ ಕೂಡಲೇ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯರಾದ ಐವಾನ್‌ ಡಿಸೋಜಾ, ನಾರಾಯಣಸ್ವಾಮಿ ನೇತೃತ್ವದಲ್ಲಿ ನೂರಾರು ಯುವ ಕಾಂಗ್ರೆಸ್‌ ಕಾರ್ಯಕರ್ತರು ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನಿತೇಶ್‌ ಅಪಾರ್ಟ್‌ಮೆಂಟ್‌ ಬಳಿ ಜಮಾಯಿಸಿದ್ದರು. ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯನ್ನು ತಳ್ಳಿ ಕಾಂಗ್ರೆಸ್‌ ಕಾರ್ಯಕರ್ತರು ಒಳ ನುಗ್ಗಲು ಯತ್ನಿಸಿದರು.

ಇದೇ ಸ್ಥಳಕ್ಕೆ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ನೇತೃತ್ವದ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ದು, ಎರಡು ಪಕ್ಷದ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿಕೊಂಡರು. ಒಂದು ಹಂತದಲ್ಲಿ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ಮತ್ತು ಕಾಂಗ್ರೆಸ್‌ ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಏಕವಚನದಲ್ಲಿ ನಿಂದಿಸಿಕೊಂಡು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿಸಿದ್ದರು. ಕೂಡಲೇ ಇಬ್ಬರು ಮುಖಂಡರ ಮಧ್ಯೆ ಪ್ರವೇಶಿಸಿದ ಪೊಲೀಸರು ಇಬ್ಬರನ್ನು ಸಮಾಧಾನಪಡಿಸಿದರು.