ತಿರುವನಂತಪುರಂ(ಆ.22): ಕೇರಳ ಪ್ರವಾಹದ ಹಿಂದೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪಿಸಿವೆ. ಸರ್ಕಾರ ರಾಜ್ಯದ ಜನತೆಗೆ ಸೂಕ್ತ ಮುನ್ನೆಚ್ಚರಿಕೆ ನೀಡದೆಯೇ ಎಲ್ಲಾ ಡ್ಯಾಂ ಗಳ ಗೇಟ್‌ಗಳನ್ನು ಓಪನ್ ಮಾಡಿರುವುದೇ ಪ್ರವಾಹಕ್ಕೆ ಕಾರಣ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ ಆರೋಪಿಸಿದ್ದಾರೆ.

231 ಜನರನ್ನು ಬಲಿ ಪಡೆದ ಕೇರಳ ಪ್ರವಾಹಕ್ಕೆ ಮಾನವ ನಿರ್ಮಿತ ವಿಪತ್ತು ಎಂದಿರುವ ರಮೇಶ್, ಯಾವುದೇ ಎಚ್ಚರಿಕೆ ನೀಡದೆ ಎಲ್ಲಾ ಡ್ಯಾಂ ಗಳ ಗೇಟ್‌ಗಳನ್ನು ಓಪನ್ ಮಾಡಿದ್ದೆ ಪ್ರವಾಹಕ್ಕೆ ಕಾರಣ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಡ್ಯಾಂ ಗಳ ಗೇಟ್ ಓಪನ್ ಮಾಡುವ ವಿಚಾರದಲ್ಲಿ ಇಂಧನ ಸಚಿವ ಎಂಎಂ ಮಣಿ ಹಾಗೂ ಜಲ ಸಂಪನ್ಮೂಲ ಸಚಿವ ಟಿಎಂ ಥಾಮಸ್ ಐಸಾಕ್ ಅವರ ನಡುವೆ ಹೊಂದಾಣೆಕೆ ಇರಲಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.

ಜುಲೈ ಮಧ್ಯದಲ್ಲಿಯೇ ರಾಜ್ಯದ ಎಲ್ಲಾ ಡ್ಯಾಮ್ ಗಳು ಶೇ.90ರಷ್ಟು ಭರ್ತಿಯಾಗಿದ್ದವು. ಆದರೂ ಸರ್ಕಾರ ಜನತೆಗೆ ಮುನ್ನೆಚ್ಚರಿಕೆ ನೀಡದೆ ನಿರ್ಲಕ್ಷ ವಹಿಸಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಆರೋಪಿಸಿದ್ದಾರೆ.