ವಂಶವಾದ ಆರೋಪ: ಕೈ ನಿಂದ ‘ಯುವ’ಜಪ!

Congress Attempts to Induct Youth from Non-Dynastic Backgrounds
Highlights

ವಂಶವಾದ ರಾಜಕಾರಣದಿಂದ ಹೊರಬರುತ್ತಾ ಕಾಂಗ್ರೆಸ್?

ಯುವ ಸಮುದಾಯ ಸೆಳೆಯಲು ಕೈ ರಣತಂತ್ರವೇನು?

ಯುವ ಸಮುದಾಯದೊಂದಿಗೆ ಕಾಂಗ್ರೆಸ್ ಸಂವಾದ

ಲೋಕಸಭೆ ಚುನಾವಣೆಗೆ ಬದಲಾಗುತ್ತಾ ಕೈ ರಣನೀತಿ?           

ನವದೆಹಲಿ(ಜು.8): ಸ್ವಾಂತಂತ್ರ್ಯಾ ನಂತರದ 70 ವಷರ್ಷಗಳ ರಾಜಕೀಯ ಇತಿಹಾಸದಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವೇ ದೇಶವನ್ನು ಆಳಿದೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಸ್ತಿತ್ವಕ್ಕಾಗಿ ತಡಕಾಡುತ್ತಿರುವ ಪಕ್ಷ, ತನ್ನ ಮೇಲಿರುವ ಗುರುತರ ಆರೋಪವಾದ ವಂಶವಾದ ರಾಜಕಾರಣವನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತಿದೆ.

ಇದಕ್ಕಾಗಿ ಹೊಸ ತಲೆಮಾರಿನ ಯುವ ಸಮುದಾಯಕ್ಕೆ ಪಕ್ಷದ ಸಿದ್ದಾಂತ, ಇತಿಹಾಸ, ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಪ್ರಸ್ತುತತೆ ಕುರಿತು ಜಾಗೃತಿ ಮೂಡಿಸಲು ಪಕ್ಷ ಮುಂದಾಗಿದೆ. ಇದಕ್ಕಾಗಿ ಪಕ್ಷದ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಹೌದು, ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಹತ್ತಿರವಿರುವ ಯುವ ಸಮುದಾಯವನ್ನು ರಾಜಕೀಯವಾಗಿ ಮತ್ತಷ್ಟು ಗಟ್ಟಿಗೊಳಿಸಲು ಪಕ್ಷ ಮುಂದಾಗಿದೆ. ಇತ್ತಿಚೀಗೆ ದೆಹಲಿಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 35 ಎನ್‌ಎಸ್‌ಯುಐ ಕಾರ್ಯಕರ್ತರಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

30 ವರ್ಷದೊಳಗಿನ ಈ ವಿದ್ಯಾರ್ಥಿ ನಿಯೋಗದೊಂದಿಗೆ ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಪಿ.ಚಿದಂಬರಂ, ಜೈರಾಂ ರಮೇಶ್, ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ಉನ್ನತ ನಾಯಕರು ಸಂವಾದ ನಡೆಸಿದರು. ಇನ್ನೊಂದು ವಿಶೇಷ ಎಂದರೆ ಈ ನಿಯೋಗದಲ್ಲಿದ್ದ ವಿದ್ಯಾರ್ಥಿಗಳ್ಯಾರೂ ರಾಜಕಾರಣದ ಕುಟುಂಬದಿಂದ ಬಂದವರಲ್ಲ. ಬದಲಿಗೆ ವಿವಿಧ ವರ್ಗ, ಸಮುದಾಯ ಮತ್ತು ವಿವಿಧ ಆರ್ಥಿಕ ಹಿನ್ನೆಲೆ ಹೊಂದಿದ ಯುವ ಸಮುದಾಯವಾಗಿತ್ತು.

2019 ರ ಲೋಕಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ಸಕಲ ಸಿದ್ದತೆ ನಡೆಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಈಗಾಗಲೇ ಎಲ್ಲಾ ಘಟಕಗಳಿಗೆ ನಿರ್ದಿಷ್ಟ ಜವಾಬ್ದಾರಿ ಹೊರಿಸಿ ಯುದ್ಧಕ್ಕೆ ಸಿದ್ಧವಾಗುತ್ತಿದ್ದಾರೆ. ಈ ಬಾರಿಯ ಚುನಾವಣೆಯ ವಿಶೇಷತೆ ಎಂದರೆ ಎಲ್ಲಾ ರಾಜಕೀಯ ಪಕ್ಷಗಳು ಯುವ ಸಮುದಾಯದ ಹೃದಯದ ಬಾಗಿಲು ತಟ್ಟಲು ವಿಶೇಷ ಒತ್ತು ಕೊಟ್ಟಿರುವುದು.

2019 ರ ಚುನಾವಣೆ ಹೊತ್ತಿಗೆ ದೇಶದಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವ ಮತದಾರರ ಸಂಖ್ಯೆ 15 ಕೋಟಿಗೂ ಅಧಿಕ. ಇದೇ ಕಾರಣಕಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಯುವ ಸಮುದಾಯದತ್ತ ದೃಷ್ಟಿ ನೆಟ್ಟಿವೆ. ಅಂತೆಯೇ ಕಾಂಗ್ರೆಸ್ ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಹೊಸ ತಲೆಮಾರಿನ ಹೊಸ ಆಲೋಚನೆಗಳಿಗೆ ತಕ್ಕಂತೆ ಪಕ್ಷದ ನೀತಿಗಳಲ್ಲಿ ಬದಲಾವಣೆ ತರುವತ್ತ ಗಮನ ಹರಿಸಿದೆ.

loader