ಬೆಂಗಳೂರು[ಜು.06]: ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಬೆಳವಣಿಗೆಗಳು ನಡೆಯಲಾರಂಭಿಸಿವೆ. ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಯಾರೂ ಊಹಿಸಲೂ ಸಾಧ್ಯವಾಗದ ಹಲವು ಘಟಾನುಘಟಿ ಶಾಸಕರು ರಾಜೀನಾಮೆ ನೀಡಲು ಸಜ್ಜಾಗಿದ್ದು, ವಿದೇಶ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ರಾಜ್ಯಕ್ಕೆ ವಾಪಾಸಾಗುವಷ್ಟರಲ್ಲಿ ಸರ್ಕಾರ ಪತನವಾಗುತ್ತಾ ಎಂಬ ಅನುಮಾನಗಳು ಗರಿಗೆದರಿವೆ. ರಾಜೀನಾಮೆ ನೀಡಲು ಹೊರಟವರಾರು? ಮುಂದಿದೆ ಲಿಸ್ಟ್!

ಹೌದು ಊಹಿಸಿಕೊಳ್ಳಲು ಸಾಧ್ಯವಿಲ್ಲದ ಸುಮಾರು 13ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಲು ಸ್ವೀಕರ್ ರಮೇಶ್ ಕುಮಾರ್ ಕಚೇರಿ ಕಡೆ ಹೊರಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಭಾರೀ ಸದ್ದು ಮಾಡಿದ್ದ IMA ಕ್ರಿಮಿನಲ್ ಕೇಸ್ ಕಾರಣ ಎಂಬ ಮಾತುಗಲೂ ಜೋರಾಗಿವೆ. ಕಾಂಗ್ರೆಸ್ ಸಚಿವ ಶಾಮೀಲಾದ IMA ಕ್ರಿಮಿನಲ್ ಕೇಸ್ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ, ಶಾಸಕರೆಲ್ಲಾ ಸರಹೊತ್ತಿನ ಸರಣಿ ಸಭೆ ನಡೆಸಿ ಮುಂದಿನ ಕಾರ್ಯತಂತ್ರ ನಡೆಸಿದ್ದಾರೆ. ಇದುವರೆಗೂ ಕಾಣಿಸಿಕೊಳ್ಳದ ಶಾಸಕರು ಈ ಸಭೆಯಲ್ಲಿ ಅಸಮಾಧಾನ ಹೊರಹಾಕಿ ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ.

ರಾಜೀನಾಮೆ ನೀಡಲು ಮುಂದಾದ ಶಾಸಕರ ಪಟ್ಟಿ

*ರಾಮಲಿಂಗಾ ರೆಡ್ಡಿ, ಬಿಟಿಎಂ ಲೇಔಟ್

*ಸೌಮ್ಯ ರೆಡ್ಡಿ, ಜಯನಗರ

*ಶಿವರಾಂ ಹೆಬ್ಬಾರ್, ಯಲ್ಲಾಪುರ

*ಬಿ.ಸಿ. ಪಾಟೀಲ್, ಹಿರೆಕೇರೂರು

*ಪ್ರತಾಪ್ ಗೌಡ ಪಾಟೀಲ್, ಮಸ್ಕಿ

*ವಿಶ್ವನಾಥ್, ಹುಣಸೂರು

*ಸುಬ್ಬಾರೆಡ್ಡಿ, ಬಾಗೇಪಲ್ಲಿ

*ನಾರಾಯಣಗೌಡ, ಕೆಆರ್.ಪೇಟೆ

*ರಮೇಶ್ ಜಾರಕಿಹೊಳಿ, ಗೋಕಾಕ್

*ಮಹೇಶ್ ಕುಮಟಳ್ಳಿ, ಅಥಣಿ

*ರೋಷನ್ ಬೇಗ್, ಶಿವಾಜಿನಗರ

*ಮುನಿರತ್ನ, ಆರ್. ಆರ್. ನಗರ

*ಭೈರತಿ ಬಸವರಾಜು, ಕೆ. ಆರ್. ಪುರಂ

*ಎಸ್. ಟಿ ಸೋಮಶೇಖರ್, ಯಶವಂತಪುರ

ಶಾಸಕರು ಅಸಮಾಧಾನಗೊಂಡಿದ್ದು, ರಾಜೀನಾಮೆ ನೀಡುತ್ತಾರೆಂಬ ಸುದ್ದಿ ಸದ್ದು ಮಾಡುತ್ತಿತ್ತು. ಹೀಗಿದ್ದರೂ ಸಿಎಂ ಕುಮಾರಸ್ವಾಮಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಶಾಸಕರನ್ನು ಓಲೈಸುವ ಯತ್ನವನ್ನೂ ಮಾಡಿರಲಿಲ್ಲ. ಇದೀಗ ಇದರ ಮುಂದುವರೆದ ಭಾಗ ಎಂಬಂತೆ ಶಾಸಕರು ಒಟ್ಟಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೀಗಿದ್ದರೂ ಕೈ ಪಡೆ ತಮ್ಮ ಶಾಸಕರ ಮನವೊಲಿಸುವ ಕಾರ್ಯ ಮುಂದುವರೆಸಿದೆ.