ಬೆಂಗಳೂರು(ಜು.26): ಹೈಕಮಾಂಡ್ ಸ್ಪಷ್ಟ ಆದೇಶದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಆದರೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗದಿರಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕುದುರೆ ವ್ಯಾಪಾರ ಮತ್ತು ಭ್ರಷ್ಟ ಮಾರ್ಗದಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಿದ್ದು, ತಾವೂ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭಧಲ್ಲಿ ಭಾಗವಹಿಸುವದಿಲ್ಲ ಎಂದು ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮೂಲಕ ಯಡಿಯೂರಪ್ಪ ಪ್ರಮಾಣವಚನ ಸಮಾರಂಭಕ್ಕೆ ಹೋಗದಿರುವ ನಿರ್ಧಾರ ತಿಳಿಸಿದ್ದಾರೆ.

ಅದರಂತೆ ಜೆಡಿಎಸ್ ನಾಯಕರೂ ಕೂಡ ಯಡಿಯೂರಪ್ಪ ಪ್ರಮಾಣವವಚನ ಸ್ವೀಕಾರ ಸಮಾರಂಭ ಬಹಿಷ್ಕರಿಸಲಿದ್ದಾರೆ. ಮೈತ್ರಿ ಸರ್ಕಾರ ಉರುಳಲು ಕಾರಣರಾಗಿದ್ದಾರೆ ಎಂಬ ಅಸಮಾಧಾನದಿಂದ ದೋಸ್ತಿಗಳು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.