ದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡವರೆಲ್ಲ ನಾಶವಾಗಿದ್ದಾರೆ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ‘ಕೈ’ ಜತೆಗೆ ಮೈತ್ರಿ ಮಾಡುವ ಮೊದಲು ಯೋಚಿಸಿ ಎನ್ನುವ ಸಂದೇಶವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜೆಡಿಎಸ್ ನಾಯಕರಿಗೆ ನೀಡಿದ್ದಾರೆ.

ಮಡಿಕೇರಿ (ಏ.21): ದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡವರೆಲ್ಲ ನಾಶವಾಗಿದ್ದಾರೆ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ‘ಕೈ’ ಜತೆಗೆ ಮೈತ್ರಿ ಮಾಡುವ ಮೊದಲು ಯೋಚಿಸಿ ಎನ್ನುವ ಸಂದೇಶವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜೆಡಿಎಸ್ ನಾಯಕರಿಗೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಎಚ್ಚರಿಕೆ ನೀಡಿದರು. ಜತೆಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಅವರು ಹೇಳಿದರು. ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ವರಿಷ್ಠರು ಹೇಳಿದ ಸೂತ್ರ ಜಾರಿಯಾಗದ ಬಗ್ಗೆ ಕೇಳಿದರೆ ಅದು ಭಿನ್ನಮತವೇ ಎಂದು ಪ್ರಶ್ನಿಸಿದರು.

ಆಂತರಿಕ ವ್ಯತ್ಯಾಸ ಸರಿಪಡಿಸುವುದು ಭಿನ್ನಮತವಲ್ಲ. ರಾಯಣ್ಣ ಬ್ರಿಗೇಡ್ ಬಳಿಕ ವರಿಷ್ಠರು ಮಧ್ಯಪ್ರವೇಶಿಸಿ ಕೆಲ ಸೂತ್ರಗಳನ್ನು ಕೊಟ್ಟಿದ್ದರು. ಅದು ಯಾಕೆ ಇನ್ನೂ ಅನುಷ್ಠಾನವಾಗಿಲ್ಲ, ಅನುಷ್ಠಾನಗೊಳಿಸಿ ಎಂದಷ್ಟೇ ಈಶ್ವರಪ್ಪ ಕೇಳಿದ್ದಾರೆ. ಮಾಡದಿದ್ದರೆ ವರಿಷ್ಠರ ಬಳಿಗೆ ಹೋಗುತ್ತಾರೆ. ರಾಯಣ್ಣ ಬ್ರಿಗೇಡ್ ರಾಜಕೀಯ ರಹಿತ ಸಂಘಟನೆ ಎಂದು ಸ್ಪಷ್ಟಪಡಿಸಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪುನಾರಂಭದ ಹಿಂದೆ ಯಾವುದೇ ರಾಜಕೀಯವಿಲ್ಲ. ಇದು ನ್ಯಾಯಾಲಯದ ತೀರ್ಪು. ಈ ಬಗ್ಗೆ ಅಗತ್ಯ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ. ಹಳೇ ಪ್ರಕರಣದ ವಿಚಾರಣೆ ಈಗ ಶುರುವಾದರೆ ಉಮಾಭಾರತಿ ರಾಜಿನಾಮೆ ನೀಡುವ ಅವಶ್ಯಕತೆಯಿಲ್ಲ ಎಂದರು.