ಬೆಂಗಳೂರು (ಫೆ. 23): ಚುನಾವಣಾ ಹತ್ತಿರಕ್ಕೆ ಬರುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ದ್ವೇಷಕ್ಕೆ ತಿರುಗುತ್ತಿದೆ. ಒಂದೆಡೆ  ಓರ್ವ ಕಾರ್ಯಕರ್ತನ ಕೈ ಕಟ್ ಆದರೆ  ಮತ್ತೊಂದೆಡೆ ಶಾಸಕರು ಕೊಟ್ಟ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ಕಾಳಜಿ ಹೆಚ್ಚಾಗುತ್ತಿದೆ. ಮತದಾರರಿಗೆ ಸೀರೆ, ಹಣ , ಹೆಂಡ ಹಂಚುವುದು ಶುರುವಾಗಿದೆ. ಈ ವೇಳೆ  ಜೆಡಿಎಸ್​ ಹಾಗೂ ಕಾಂಗ್ರೆಸ್​  ಕಾರ್ಯಕರ್ತರ ಮಧ್ಯೆ  ಮಾತಿನ ಚಕಮಕಿ ನಡೆದಿದ್ದು, ಇಬ್ಬರ ಜಗಳ ತಾರಕ್ಕೇರಿ ಜೆಡಿಎಸ್ ಕಾರ್ಯಕರ್ತ ಲೋಕೇಶ್​  ಕೈ ಕತ್ತರಿಸಿದ್ದಾನೆ.  ಕೂಡಲೇ  ರವಿಯನ್ನು ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ಹಾಸ್​ ಮ್ಯಾಟ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಈ ಸಂಬಂಧ ಮಂಚೇನ ಹಳ್ಳಿ  ಪೊಲೀಸ್​ ಠಾಣೆಯಲ್ಲಿ  ದೂರ ದಾಖಲಾಗಿದೆ. 
ಇದೆಲ್ಲಾ ಒಂದು‌ ಕಡೆ‌ ಆದರೆ ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಮತದಾರರಿಗೆ ಶಾಸಕ ಸುಧಾಕರ್, ಸಂಕ್ರಾಂತಿ ಸುಗ್ಗಿ ನೆಪದಲ್ಲಿ ಸೀರೆಗಳನ್ನು  ಹಂಚುತ್ತಿದ್ದಾರೆ. ಆದರೆ ಸೀರೆಗಳನ್ನು ‌ಪಡೆದ ವ್ಯಕ್ತಿಯೋರ್ವ ತೆಗೆದುಕೊಂಡ ಸೀರೆಗಳಿಗೆ ಬೆಂಕಿ ‌ಹಚ್ಚಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ಅಲ್ಲದೇ, ಈ ವಿಡಿಯೋವನ್ನು  ಸಾಮಾಜಿಕ ಜಾಲತಾಣಗಳಲ್ಲಿ  ಹರಿದುಬಿಟ್ಟಿದ್ದಾರೆ. ನಮಗೆ ಸೀರೆ‌ಬೇಡ, ಅಭಿವೃದ್ಧಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.