ಬೆಂಗಳೂರು [ಜು.23] : ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ಇಂದು ಸಂಜೆ 6 ಗಂಟೆಗೆ ವಿಶ್ವಾಸಮತಕ್ಕೆ ಡೆಡ್ ಲೈನ್ ನೀಡಲಾಗಿದೆ. 

ಈ ನಿಟ್ಟಿನಲ್ಲಿ ದೋಸ್ತಿ ಪಡೆ ಮಿಡ್ ನೈಟ್ ಆಪರೇಷನ್ ನಡೆಸಿದ್ದು, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಮ್ಮ ಯತ್ನ ಮುಂದುವರಿಸಿದ್ದು, ದೋಸ್ತಿ ನಾಯಕರೊಂದಿಗೆ ರಾತ್ರಿಪೂರ್ತಿ ಕಾರ್ಯಾಚರಣೆ ನಡೆಸಿದ್ದಾರೆ. 

ವಿಶ್ವಾಸ ಮತಕ್ಕೆ ಇಂದು ಡೆಡ್ ಲೈನ್ ನೀಡಿದ ಹಿನ್ನೆಲೆ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಅತೃಪ್ತರ ಮನವೊಲಿಕೆಗೆ ರಾತ್ರಿ ಪೂರ್ತಿ ಯತ್ನಿಸಿದ್ದಾರೆ. 

ರಾತ್ರಿ ಅತೃಪ್ತರ ಕುಟುಂಬಸ್ಥರನ್ನು ಸಂಪರ್ಕಿಸಿದ ಡಿ.ಕೆ.ಶಿವಕುಮಾರ್ 6 ವರ್ಷಗಳ ಕಾಲ ಅನರ್ಹವಾಗುವ ಎಚ್ಚರಿಕೆ ನೀಡಿದ್ದಾರೆ.  ವಾಪಸ್ ಬರಲು ಮನವೊಲಿಸುವಂತೆಯೂ ಕುಟುಂಬಸ್ಥರ ಬಳಿ ಕೇಳಿಕೊಂಡರು. 

ಮಿಡ್ ನೈಟ್ ಆಪರೇಷನ್ ನಡೆಸುತ್ತಿರುವ ಮೈತ್ರಿ ನಾಯಕರು ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅತೃಪ್ತರೆಲ್ಲಾ ಸ್ಪೀಕರ್ ಗೆ ಪತ್ರ ರವಾನಿಸಿದ್ದು,  ಭೇಟಿಯಾಗಲು ಸಮಯಾವಕಾಶ ಕೋರಿದ್ದಾರೆ.  ಈ ಮೂಲಕ ಮೈತ್ರಿ ನಾಯಕರು ಹೆಣೆಯುತ್ತಿರುವ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುತ್ತಿದ್ದಾರೆ.