ಸರ್ಕಾರದ 30 ಸ್ಥಾನಗಳ ಭರ್ತಿ ಶೀಘ್ರದಲ್ಲೇ : ಯಾರಿಗೆ ಅವಕಾಶ ?

Cong-JDS Corporation Board  Hired Soon
Highlights

ಮುಂದಿನ 15 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲು ನಿಗಮ, ಮಂಡಳಿ ಅಧ್ಯಕ್ಷರ ನೇಮಕ ಮಾಡಿ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು:  ಮುಂದಿನ 15 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲು ನಿಗಮ, ಮಂಡಳಿ ಅಧ್ಯಕ್ಷರ ನೇಮಕ ಮಾಡಿ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಆದರೆ, ಈಗಲೇ ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲು ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ನ ಇತರ ಮೂಲಗಳ ಪ್ರಕಾರವೂ ಕುಮಾರಸ್ವಾಮಿ ಹೇಳಿದಷ್ಟುಶೀಘ್ರವಾಗಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಕಡಿಮೆ. ಏಕೆಂದರೆ, ಕಾಂಗ್ರೆಸ್‌ ಪಕ್ಷ ಸಚಿವ ಸಂಪುಟ ವಿಸ್ತರಣೆಗಿಂತ ನಿಗಮ ಮಂಡಳಿಗಳ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಮೊದಲ ಹಂತದಲ್ಲಿ 30 ನಿಗಮ ಮಂಡಳಿಗಳಿಗೆ ಕಾಂಗ್ರೆಸ್‌ ಶಾಸಕರನ್ನು ನೇಮಕ ಮಾಡಬೇಕು. ಈ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಆರಂಭಿಸಿದ್ದು, ನಿಗಮ ಮಂಡಳಿಗಳ ನೇಮಕಕ್ಕೆ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಪ್ರಕ್ರಿಯೆ ನಡೆಯಲು ಕನಿಷ್ಠ 10ರಿಂದ 15 ದಿನ ಬೇಕಾಗುತ್ತದೆ.

ಇದಾದ ನಂತರ ಸಚಿವ ಸಂಪುಟ ವಿಸ್ತರಣೆ ನಡೆಸುವ ಇರಾದೆ ಕಾಂಗ್ರೆಸ್‌ನದ್ದು. ಒಟ್ಟಾರೆ ಇನ್ನೊಂದು ತಿಂಗಳ ಒಳಗೆ ನಿಗಮ ಮಂಡಳಿ ಹಾಗೂ ಸಚಿವ ಸಂಪುಟ ವಿಸ್ತರಣೆಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ.

4 ಸ್ಥಾನಗಳ ರೇಸಲ್ಲಿ  9 ಮಂದಿ ಶಾಸಕರು

ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ನಾಲ್ಕು ಮಂದಿಗೆ ಅವಕಾಶ ನೀಡುವ ಉದ್ದೇಶವನ್ನು ಕಾಂಗ್ರೆಸ್‌ ನಾಯಕತ್ವ ಹೊಂದಿದೆ ಎನ್ನಲಾಗಿದೆ. ಈ ಮೂಲಗಳ ಪ್ರಕಾರ ಲಿಂಗಾಯತ, ಪರಿಶಿಷ್ಟ(ಎಡಗೈ), ಕುರುಬ ಸಮುದಾಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಅಲ್ಲದೆ, ಅಸಮಾಧಾನಗೊಂಡಿರುವ ಹಿರಿಯರಿಗೆ ಅವಕಾಶ ನೀಡುವುದೋ ಅಥವಾ ಒಕ್ಕಲಿಗ ಸಮುದಾಯಕ್ಕೆ ಅವಕಾಶ ನೀಡುವುದೋ ಎಂಬ ಗೊಂದಲವಿದೆ.

ಲಿಂಗಾಯತರ ಪೈಕಿ ಎಂ.ಬಿ.ಪಾಟೀಲ್‌ (ಅಥವಾ ಸಂಗಮೇಶ್ವರ್‌), ಕುರುಬರ ಪೈಕಿ ಸಿ.ಎಸ್‌. ಶಿವಳ್ಳಿ (ಒಂದು ವೇಳೆ ಸಚಿವ ಸಂಪುಟಕ್ಕೆ ಎಚ್‌.ಕೆ. ಪಾಟೀಲ್‌ ಅವರನ್ನು ತೆಗೆದುಕೊಂಡರೆ ಆಗ ದಕ್ಷಿಣ ಕರ್ನಾಟಕದಿಂದ ಎಂ.ಟಿ.ಬಿ. ನಾಗರಾಜ್‌ಗೆ ಅದೃಷ್ಟಖುಲಾಯಿಸಬಹುದು, ಪರಿಶಿಷ್ಟರ ಎಡಗೈ ಪಂಗಡದ ಪೈಕಿ ಆರ್‌.ಬಿ. ತಿಮ್ಮಾಪುರ ಮತ್ತು ಸಂಸದ ಕೆ.ಎಚ್‌. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್‌ ಅವರಿಬ್ಬರ ಪೈಕಿ ಒಬ್ಬರಿಗೆ ಅವಕಾಶ ದೊರೆಯಬಹುದು.

ಇನ್ನು ನಾಲ್ಕನೆಯ ಸಚಿವ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕೋ ಅಥವಾ ಜಾತಿ ಮೀರಿ ಹಿರಿಯ ನಾಯಕರೊಬ್ಬರಿಗೆ ನೀಡಬೇಕೋ ಎಂಬ ಗೊಂದಲವಿದೆ. ಒಕ್ಕಲಿಗರಿಗೆ ಹುದ್ದೆ ನೀಡಬೇಕು ಎಂದು ನಿರ್ಧಾರವಾದರೆ ಆಗ ಎಂ.ಕೃಷ್ಣಪ್ಪ ಅವರಿಗೆ ಅದೃಷ್ಟಒಲಿಯಬಹುದು. ಜಾತಿ ಲೆಕ್ಕಾಚಾರ ಮೀರಿ ಹಿರಿಯ ಮುಖಂಡರಿಗೆ ನೀಡಬೇಕು ಎಂದು ತೀರ್ಮಾನಿಸಿದರೆ ಆಗ ಎಚ್‌.ಕೆ. ಪಾಟೀಲ್‌ ಅಥವಾ ರಾಮಲಿಂಗಾರೆಡ್ಡಿ ಪೈಕಿ ಒಬ್ಬರಿಗೆ ಹುದ್ದೆ ದೊರೆಯಬಹುದು ಎನ್ನಲಾಗುತ್ತಿದೆ. ಆದರೆ, ಇದು ಅಂತಿಮಗೊಳ್ಳುವುದು ನಿಗಮ ಮಂಡಳಿ ನೇಮಕಾತಿಯ ನಂತರವೇ ಎಂದು ಮೂಲಗಳು ತಿಳಿಸಿವೆ.

loader