ನವದೆಹಲಿ[ಜು.15]: ಬಾಬ್ರಿ ಮಸೀದಿ ಧ್ವಂಸಕ್ಕಿಂತ 2 ವರ್ಷ ಮುನ್ನ ಅಂದರೆ 1990ರಲ್ಲಿ ಕಾಂಗ್ರೆಸ್‌ ಬೆಂಬಲಿತ ಚಂದ್ರಶೇಖರ್‌ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ತರುವ ಮೂಲಕ ಅಯೋಧ್ಯೆ ವಿವಾದ ಬಗೆಹರಿಸಲು ಉದ್ದೇಶಿಸಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಅದು ವಿಫಲವಾಗಿತ್ತು ಎಂಬ ಸಂಗತಿಯನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಅವರು ಚಂದ್ರಶೇಖರ್‌ ಅವರ ಬಗ್ಗೆ ಬರೆದ ಪುಸ್ತಕವೊಂದು ಬಹಿರಂಗಪಡಿಸಿದೆ. ‘ಚಂದ್ರಶೇಖರ್‌- ‘ದ ಲಾಸ್ಟ್‌ ಐಕಾನ್‌ ಆಫ್‌ ಐಡಿಯೊಲಾಜಿಕಲ್‌ ಪೊಲಿಟಿಕ್ಸ್‌’ ಎಂಬ ಪುಸ್ತಕದಲ್ಲಿ ಈ ಸಂಗತಿ ವಿವರಿಸಲಾಗಿದೆ.

ಚಂದ್ರಶೇಖರ್‌ ಅವರು ಅಂದು ಮುಖ್ಯಮಂತ್ರಿಗಳಾಗಿದ್ದ ಶರದ್‌ ಪವಾರ್‌, ಮುಲಾಯಂ ಸಿಂಗ್‌ ಯಾದವ್‌ ಮತ್ತು ಭೈರೋನ್‌ ಸಿಂಗ್‌ ಶೇಖಾವತ್‌ ಅವರೊಂದಿಗೆ ವಿಶ್ವ ಹಿಂದು ಪರಿಷತ್‌ ಹಾಗೂ ಮುಸ್ಲಿಂ ಮುಖಂಡರ ಜೊತೆ ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಸಂಧಾನ ನಡೆಸಿದ್ದರು. ಅಯೋಧ್ಯೆಲ್ಲಿನ ವಿವಾದಿತ ಸ್ಥಳವನ್ನು ಸ್ಮಾರಕವಾಗಿ ಉಳಿಸಿಕೊಳ್ಳುವುದು ಮತ್ತು ಸಮೀಪದ ಜಾಗದಲ್ಲಿ ರಾಮಮಂದಿರ ಹಾಗೂ ಮಸೀದಿ ನಿರ್ಮಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ವಿಎಚ್‌ಪಿ ಹಾಗೂ ಮುಸ್ಲಿಂ ಮುಖಂಡರ ಮಧ್ಯೆ ಸಹಮತವೂ ವ್ಯಕ್ತವಾಗಿತ್ತು.

ಆದರೆ, ದೀರ್ಘಕಾದಿಂದ ಕಗ್ಗಂಟಾಗಿರುವ ಅಯೋಧ್ಯೆ ವಿವಾದವನ್ನು ಬಗೆಹರಿಸಿದ ಶೇಯಸ್ಸನ್ನು ಚಂದ್ರ ಶೇಖರ್‌ ಪಡೆದುಕೊಳ್ಳುವುದು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ರಾಜೀವ್‌ ಗಾಂಧಿ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸುವುದು ಪ್ರಧಾನಿ ಚಂದ್ರಶೇಖರ್‌ಗೆ ಸಾಧ್ಯವಾಗಲಿಲ್ಲ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.