ಬೆಂಗಳೂರು :  ಮಿತ್ರ ಪಕ್ಷ ಕಾಂಗ್ರೆಸ್ ಶಾಸಕರ ಎಚ್ಚರಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿವಿಧ ನಿಗಮ ಮಂಡಳಿಗಳ ನೇಮಕ ಕುರಿತ ಕಡತಕ್ಕೆ ಸಹಿ ಹಾಕಿ ಆದೇಶ ಹೊರಡಿಸಿದ್ದಾರೆ. ಆದರೆ ತಮ್ಮ ಜೆಡಿಎಸ್ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿದ್ದ 9 ನೇಮಕಗಳಿಗೆ ತಡೆ ಒಡ್ಡುವ ಮೂಲಕ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.

ಮುಖ್ಯಮಂತ್ರಿಗಳ ಈ ನಡೆ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮಿತ್ರ ಪಕ್ಷಗಳ ನಡುವೆ ಮತ್ತಷ್ಟು ಭಿನ್ನಾಭಿಪ್ರಾಯ ಹುಟ್ಟು ಹಾಕುವ ಸಾಧ್ಯತೆ ಕಂಡು ಬರುತ್ತಿದೆ. ಸುಮಾರು 2 ವಾರಗಳ ಹಿಂದೆಯೇ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ದೆಹಲಿಗೆ ತೆರಳಿ ತಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅನುಮತಿಯೊಂದಿಗೆ ಪಟ್ಟಿ ಸಿದ್ಧಪಡಿಸಿಕೊಂಡು ತಲುಪಿಸಿದ್ದರೂ ಕುಮಾರಸ್ವಾಮಿ ಅವರು ಮಾತ್ರ ನೇಮಕ
ಆದೇಶಕ್ಕೆ ಸಹಿ ಹಾಕಿರಲಿಲ್ಲ.

ವಿವಿಧ ನೆಪವೊಡ್ಡಿ ಮುಂದೂಡುತ್ತಲೇ ಬಂದಿದ್ದರು. ಆದರೆ, ಮುಖ್ಯಮಂತ್ರಿಗಳ ವಿಳಂಬ ನೀತಿ ಖಂಡಿಸಿ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಮಂಗಳವಾರದ ಗಡುವು ನೀಡಿದ್ದರು. ಮಂಗಳವಾರದೊಳಗೆ ನಿಗಮ ಮಂಡಳಿಗಳ ನೇಮಕ ಕುರಿತ ಆದೇಶಕ್ಕೆ ಸಹಿ ಹಾಕದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದರು.

ಕಾಂಗ್ರೆಸ್ ಶಾಸಕರ ಎಚ್ಚರಿಕೆಯ ಮರುದಿನವೇ ಭಾನುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿಗಳ ನೇಮಕ ಕುರಿತ ಕಡತಕ್ಕೆ ಸಹಿ ಹಾಕಿ ಆದೇಶ ಹೊರಡಿಸಿದರು. ಆದರೆ, ಯೋಜನಾ ಮಂಡಳಿ ಉಪಾಧ್ಯಕ್ಷ, ದೆಹಲಿ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಒಂದು ಸಂಸದೀಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಾಗೂ ಐದು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಿಲ್ಲ.

ಕಾರಣ ಏನು?: ತಾವು ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಶಾಸಕರು ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗುವುದು ಸರಿಯಲ್ಲ. ಹಾಗೊಂದು ವೇಳೆ ಮಾಡುವುದಿದ್ದರೂ ತಮ್ಮೊಂದಿಗೆ ಚರ್ಚಿಸಬೇಕಾಗಿತ್ತು ಎಂಬ ಆಕ್ಷೇಪವನ್ನು ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದರು. 

ಅಲ್ಲದೆ, ತಮಗೆ ನೇರವಾಗಿ ಸಂಬಂಧಪಡುವ ಯೋಜನಾ ಮಂಡಳಿ ಉಪಾಧ್ಯಕ್ಷ ಹಾಗೂ ದೆಹಲಿ ಪ್ರತಿನಿಧಿಗಳ ನೇಮಕ ವೇಳೆಯೂ ಸಮಾಲೋಚನೆ ನಡೆಸದೆ ಕೇವಲ ಹೆಸರುಗಳನ್ನು ಅಂತಿಮಗೊಳಿಸಿ ಕಳುಹಿಸಿದ್ದು ಸರಿಯಲ್ಲ ಎಂದೂ ಜೆಡಿಎಸ್ ನಾಯಕರು ದೂರಿದ್ದರು. ಇವುಗಳ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಾಂತ್ರಿಕವಾಗಿ ಪರಿಣಿತರಾದವರನ್ನು ನೇಮಿಸಬೇಕು ಎಂಬ ಬಲವಾದ ಅಭಿಪ್ರಾಯ ಹೊಂದಿರುವ ಜೆಡಿಎಸ್ ನಾಯಕರು ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರ ನೇಮಕ ಪ್ರಸ್ತಾವನೆಯನ್ನು ವಿರೋಧಿಸಿದ್ದರು.

ಆದರೆ, ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರನ್ನು ಸಂಸದೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲು ತಡೆ ಒಡ್ಡಿರುವುದಕ್ಕೆ ನಿರ್ದಿಷ್ಟ ಕಾರಣಗಳು ಹೊರಬಿದ್ದಿಲ್ಲ. ಇನ್ನು ಜೆಡಿಎಸ್ ಪಾಲಿಗೆ ಬಂದಿರುವ ಖಾತೆಗಳ ಅಡಿಯಲ್ಲಿ ಬರುವ ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಶಾಸಕರನ್ನು ನೇಮಿಸುವುದನ್ನು ಬಲವಾಗಿ ವಿರೋಧಿಸಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಆ ಪಕ್ಷದ ನಾಯಕರು ಮುಖ್ಯಮಂತ್ರಿಗಳಿಗೆ ದೂರನ್ನು ನೀಡಿದ್ದರು. 

ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೂ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಐದು ನಿಗಮ  ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಹಸಿರು ನಿಶಾನೆ ನೀಡಿಲ್ಲ.