ಕರ್ನಾಟಕ ಮತ್ತು ಗೋವಾದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಕ್ಷಿಪ್ರ ಬೆಳವಣಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಚರ್ಚೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು, ಯಾವಾಗ ಅನ್ವಯವಾಗುತ್ತದೆ, ಶಾಸಕರು ಅನರ್ಹಗೊಂಡರೆ ಏನಾಗುತ್ತದೆ, ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಈ ಕಾಯ್ದೆ ಜಾರಿ ಮಾಡಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವೇ ಈ ಕುರಿತ ಮಾಹಿತಿ ಇಲ್ಲಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಏಕೆ/ ಹೇಗೆ ಜಾರಿಗೆ ಬಂತು?

ಆಯಾ ರಾಮ ಗಯಾ ರಾಮ್‌ ಎನ್ನುವುದು ಎಲ್ಲರಿಗೂ ಚಿರಪರಿಚಿತವಿರುವ ಬಾಯಿಮಾತು. ಆದರೆ ಅದರ ಹಿನ್ನೆಲೆ ಈ ಪಕ್ಷಾಂತರಕ್ಕೆ ಸಂಬಂಧಪಟ್ಟಿದ್ದು. ಅಂದರೆ ಪದೇ ಪದೇ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿರುವುದು. 1967ರಲ್ಲಿ ಹರಿಯಾಣದ ಶಾಸಕ ಗಯಾಲಾಲ್‌ ಎಂಬುವವರು ಒಂದೇ ದಿನ ಮೂರು ಪಕ್ಷವನ್ನು ಬದಲಾಯಿಸಿದ್ದರು. ಅನಂತರ ಈ ಪಕ್ಷಾಂತರ ಪಿಡುಗನ್ನು ನಿಯಂತ್ರಿಸುವ ಮೊದಲ ಪ್ರಯತ್ನ ನಡೆದಿದ್ದು 1968ರಲ್ಲಿ.

ಕಾಂಗ್ರೆಸ್‌ ಸದಸ್ಯ ಪಿ ಎ ವೆಂಕಟಸುಬ್ಬಯ್ಯ ಈ ಉದ್ದೇಶದ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅದರ ಪರಿಣಾಮ ನೇಮಕಗೊಂಡಿದ್ದು ವೈ ಬಿ ಚೌವ್ಹಾಣ್‌ ಸಮಿತಿ. ಆದರೆ ಅದು ನೀಡಿದ ವರದಿ ಬಗ್ಗೆ ಹೆಚ್ಚು ಚರ್ಚೆ ನಡೆಯಲಿಲ್ಲ. ಅನಂತರ 1978ರಲ್ಲಿ ಮೊರಾರ್ಜಿ ದೇಸಾಯಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಬಯಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳು ವಿರೋಧಿಸಿದ್ದವು.

ಅದಾದ ಬಳಿಕ ಇಂತಹ ಪಕ್ಷಾಂತರಿಗಳಿಗೆ ಲಗಾಮು ಹಾಕುವ ಉದ್ದೇಶದಿಂದ ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಂದರೆ 1985ರ ಜನವರಿ 30ರಂದು ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದರು. ಇದನ್ನು ಸಂವಿಧಾನದ 52ನೇ ತಿದ್ದುಪಡಿಯಲ್ಲಿ 10ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆ ಮಾಡಲಾಯಿತು. 2003ರಲ್ಲಿ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಈ ಕಾಯ್ದೆಗೆ ಮತ್ತಷ್ಟುಬಲ ತುಂಬಿದರು.

ಯಾವುದು ಪಕ್ಷಾಂತರ?

- ನಿರ್ದಿಷ್ಟರಾಜಕೀಯ ಪಕ್ಷದಿಂದ ಆಯ್ಕೆಯಾಗುವ ಯಾವುದೇ ಶಾಸಕ/ಸಂಸದರು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರಿದರೆ ಅದು ಪಕ್ಷಾಂತರ. ಅಂಥವರನ್ನು ಪಕ್ಷವು ಅನರ್ಹಗೊಳಿಸಬಹುದು.

- ಶಾಸನ ಸಭೆಯಲ್ಲಿ ಮತದಾನದ ಸಮಯದಲ್ಲಿ ಹಾಜರಿರಲೇಬೇಕು ಎಂದು ರಾಜಕೀಯ ಪಕ್ಷವೊಂದು ತನ್ನ ಶಾಸಕ ಅಥವಾ ಸಂಸದರಿಗೆ ವಿಪ್‌ ಜಾರಿ ಮಾಡಿದ ಬಳಿಕವೂ ಅದನ್ನು ಉಲ್ಲಂಘನೆ ಮಾಡುವವರು ಹಾಗೂ ಮತದಾನದಿಂದ ದೂರ ಉಳಿಯುವವರು ಪಕ್ಷಾಂತರಿ. ಇಂಥವರನ್ನು ಅನರ್ಹಗೊಳಿಸಬಹುದು.

ಯಾವುದು ಪಕ್ಷಾಂತರವಲ್ಲ?

-ಒಬ್ಬ ಶಾಸಕ ತನ್ನ ಪಕ್ಷದ ಸಮೇತ ಮತ್ತೊಂದು ಪಕ್ಷಕ್ಕೆ ಸೇರಿ ತಾನು ಮತ್ತು ಉಳಿದ ಮೂಲ ರಾಜಕೀಯ ಪಕ್ಷದ ಸದಸ್ಯರು ಆ ಪಕ್ಷದ ಸದಸ್ಯರಾಗಿದ್ದೇವೆ ಎಂದು ಘೋಷಿಸಿದರೆ ಅದು ಪಕ್ಷಾಂತರ ಅಲ್ಲ.

- ಸಭಾಪತಿ, ಸ್ಪೀಕರ್‌ಗಳು ತಾವು ಪ್ರತಿನಿಧಿಸುವ ಪಕ್ಷಕ್ಕೆ ರಾಜೀನಾಮೆ ನೀಡುವುದು ಪಕ್ಷಾಂತರ ಎಂದು ಕರೆಸಿಕೊಳ್ಳುವುದಿಲ್ಲ.

- ಸ್ವಇಚ್ಛೆಯಿಂದ ಎರಡು ವಾರ ಮುಂಚಿತವಾಗಿ ಪಕ್ಷದ ಮುಖ್ಯಸ್ಥರಿಂದ ಅನುಮತಿ ಪಡೆದು ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋದರೆ ಅನರ್ಹರಾಗುವುದಿಲ್ಲ.

-ಯಾವುದೇ ಒಂದು ಪಕ್ಷದ ಕನಿಷ್ಠ ಮೂರನೇ ಎರಡರಷ್ಟುಶಾಸಕರು ಅಥವಾ ಸಂಸದರು ಒಟ್ಟಿಗೇ ಬೇರೆ ಪಕ್ಷದ ಜೊತೆ ವಿಲೀನವಾದರೆ ಅಥವಾ ಪ್ರತ್ಯೇಕ ರಾಜಕೀಯ ಗುಂಪು ಮಾಡಿಕೊಂಡರೆ ಅದು ಪಕ್ಷಾಂತರವಲ್ಲ. (2003ರವರೆಗೆ ಮೂರನೇ ಒಂದರಷ್ಟುಶಾಸಕರು ಪಕ್ಷ ಇಬ್ಭಾಗ ಮಾಡಿದರೆ ಎಂದಿತ್ತು. ನಂತರ ಈ ಅಂಶವನ್ನು ಮೂರನೇ ಎರಡರಷ್ಟುಸದಸ್ಯರು ಎಂದು ತಿದ್ದುಪಡಿ ಮಾಡಲಾಯಿತು)

ಜಾರಿ ಮಾಡುವ ಅಧಿಕಾರ ಇರುವುದು ಸ್ಪೀಕರ್‌ಗೆ ಮಾತ್ರ

ಶಾಸಕಾಂಗ ಪಕ್ಷದ ಸದಸ್ಯರೊಬ್ಬರು ಪಕ್ಷಾಂತರ ಮಾಡಿದ್ದಾರೆಯೋ ಅಥವಾ ಇಲ್ಲವೋ ಎಂಬ ನಿರ್ಣಯವನ್ನು ಸಭಾಧ್ಯಕ್ಷರು ತೀರ್ಮಾನಿಸಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆಯೇ ಎಂದು ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.

ಅನರ್ಹರಾದರೆ ಏನಾಗುತ್ತೆ?

- ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು 15ನೇ ವಿಧಾನಸಭೆ. ಈ ವಿಧಾನಸಭೆಯ ಸದಸ್ಯರೊಬ್ಬರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದರೆ, ಅವರು 15ನೇ ವಿಧಾನಸಭೆಯ ಉಪ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ ಅವರು ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (16ನೇ) ಸ್ಪರ್ಧಿಸಬಹುದು. ಹಾಗೆಯೇ 164(1ಬಿ) ವಿಧಿಯಡಿ, ಹೀಗೆ ಅನರ್ಹರಾಗಿರುವ ಸದಸ್ಯರನ್ನು ಪ್ರಸಕ್ತ್ತ ಸರ್ಕಾರದ ಅವಧಿ ಮುಗಿಯುವವರೆಗೆ, ಅಂದರೆ ಮತ್ತೊಂದು ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ಸಚಿವರನ್ನಾಗಿ ಮಾಡುವಂತಿಲ್ಲ ಮತ್ತು ಪುನರಾಯ್ಕೆ ಮಾಡುವಂತಿಲ.

- ಅಪರಾಧ ಪ್ರಕರಣವೊಂದರಲ್ಲಿ ಶಾಸಕರು 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೊಳಗಾದರೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8ರ ಅಡಿ ಅವರು 6 ವರ್ಷ ನಿಷೇಧಕ್ಕೆ ಒಳಗಾಗುತ್ತಾರೆ. ಶಿಕ್ಷೆಗೊಳಗಾದ ತಕ್ಷಣ ಅವರ ಶಾಸಕತ್ವ ಹೋಗುತ್ತದೆ ಮತ್ತು 6 ವರ್ಷ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8(4)ರ ಪ್ರಕಾರ ಇಂಥವರು ಅನರ್ಹರಾದ 3 ತಿಂಗಳ ಒಳಗೆ ಮೇಲ್ಮನವಿ ಸಲ್ಲಿಸಿದಲ್ಲಿ ನಿಷೇಧ ಅನ್ವಯಿಸದು.

ಕಾಲ ಮಿತಿ ಇದೆಯೇ?

ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಅವರನ್ನು ಇಂತಿಷ್ಟೇ ಸಮಯದ ಒಳಗಾಗಿ ಅನರ್ಹಗೊಳಿಸಬೇಕೆಂಬ ಕಾಲಮಿತಿ ಇಲ್ಲ.

ರಾಜೀನಾಮೆ v/s ಅನರ್ಹತೆ

- ಒಂದು ವೇಳೆ ಶಾಸಕರೊಬ್ಬರು ಅನರ್ಹಗೊಂಡರೆ ಆ ವಿಧಾನಸಭೆಯ ಅವಧಿಯಲ್ಲಿ ಮತ್ತೊಮ್ಮೆ ಚುನಾಯಿತರಾಗದೆ ಸಚಿವರಾಗುವಂತಿಲ್ಲ ಮತ್ತು ಉಪ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

- ಆದರೆ ಶಾಸಕರೊಬ್ಬರು ರಾಜೀನಾಮೆ ನೀಡಿದರೆ 6 ತಿಂಗಳ ಒಳಗಾಗಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದು ಸಚಿವರೂ ಆಗಬಹುದು.

ಈಗೇಕೆ ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆ?

ಕರ್ನಾಟಕದ ಮೈತ್ರಿ ಸರ್ಕಾರ ಮತ್ತು ಗೋವಾ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಹಠಾತ್‌ ಬೆಳವಣಿಗೆಯಲ್ಲಿ ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ 13 ಜನ ಶಾಸಕರು ಸರಣಿ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಸಮ್ಮಿಶ್ರ ಸರ್ಕಾರದ ಅಸ್ತಿತ್ವ ಅಲುಗಾಡುತ್ತಿದೆ. ಈ ಕ್ಷಿಪ್ರ ರಾಜೀನಾಮೆ ಕ್ರಾಂತಿಯ ಬೆನ್ನಲ್ಲೇ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಹರಸಾಹಸಪಡುತ್ತಿವೆ.

ಈ ನಡುವೆ ಶಾಸಕರ ರಾಜೀನಾಮೆಯನ್ನು ತಕ್ಷಣ ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದ್ದಾರೆ. ಈ ವಿಷಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ತಕ್ಷಣ ರಾಜೀನಾಮೆ ಅಂಗೀಕಾರವೂ ಸಾಧ್ಯವಿಲ್ಲ, ಹಾಗೆಯೇ ಸ್ಪೀಕರ್‌ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆಯೂ ಇಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಅತ್ತ ಗೋವಾದಲ್ಲಿ ಕಾಂಗ್ರೆಸ್‌ 15 ಶಾಸಕರ ಪೈಕಿ 10 ಶಾಸಕರು ಬಿಜೆಪಿ ಸೇರಿದ್ದಾರೆ.

ಆ ಮೂಲಕ ಬಿಜೆಪಿ ಅಲ್ಲಿ ಸರ್ಕಾರ ನಡೆಸಲು ಬೇಕಾದ ಸ್ಪಷ್ಟಬಹುಮತ ಪಡೆದಿದೆ. ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಬಹುದು ಎಂಬ ಗುಸುಗುಸು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವು ಅತೃಪ್ತ ಶಾಸಕರನ್ನು ಕಟ್ಟಿಹಾಕಬಹುದೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಕರ್ನಾಟಕ ಮತ್ತು ಗೋವಾ ವಿದ್ಯಮಾನಕ್ಕೆ ಪಕ್ಷಾಂತರ ನಿಷೇಧ ಅನ್ವಯವಾಗುತ್ತದೆಯೇ?

ಸದ್ಯ ಗೋವಾ ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಶಾಸಕರು ರಾಜೀನಾಮೆ ನೀಡಿದ್ದಾರೆ. ಅಂದರೆ ಪಕ್ಷದ ಮೂರನೇ ಎರಡರಷ್ಟುಶಾಸಕರು ರಾಜೀನಾಮೆ ನೀಡಿದಂತಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಇಂತಹ ಸಂದರ್ಭದಲ್ಲಿ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ.

ಇನ್ನು ಕರ್ನಾಟಕದಲ್ಲಿ 13 ಜನ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭಾ ಸಭಾಪತಿ ರಮೇಶ್‌ ಕುಮಾರ್‌ ಅದನ್ನು ಇನ್ನೂ ಅಂಗೀಕರಿಸಿಲ್ಲ. ಇದು ಅಂಗೀಕಾರವಾಗದೆ ಈ ಎಲ್ಲಾ ಶಾಸಕರು ಮತ್ತೊಂದು ಪಕ್ಷಕ್ಕೆ ಸೇರಿದಲ್ಲಿ ಅದು ಪಕ್ಷ ವಿರೋಧಿ ಚಟುವಟಿಕೆಯೆಂದು ಕರೆಸಿಕೊಂಡು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ.

ಆದರೆ ಇಲ್ಲಿ ಅತೃಪ್ತ ಶಾಸಕರು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಪಕ್ಷದ ಸದಸ್ಯತ್ವ ತೊರೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಈ ಕಾಯ್ದೆ ಅನ್ವಯವಾಗಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸುಪ್ರೀಂಕೋರ್ಟ್‌ನಲ್ಲಿ ಈ ಕುರಿತು ವಿವಾದ ನಡೆಯುತ್ತಿದೆ.

ಬಿಎಸ್‌ವೈ ಸಿಎಂ ಆಗಿದ್ದಾಗಲೂ ಹೀಗೇ ಆಗಿತ್ತು

2010ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬೋಪಯ್ಯ ಸ್ಪೀಕರ್‌ ಆಗಿದ್ದರು. ಹದಿಮೂರು ಬಿಜೆಪಿ ಶಾಸಕರು ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಾಗಿದ್ದ ಭಾರದ್ವಾಜ್‌ ಅವರಿಗೆ ದೂರು ಸಲ್ಲಿಸಿದ್ದರು. ಅದರಂತೆಯೇ, ವಿಶ್ವಾಸಮತ ಯಾಚಿಸುವಂತೆ ಬಿಎಸ್‌ವೈ ಅವರಿಗೆ ಸೂಚಿಸಲಾಗಿತ್ತು. ಆ ವೇಳೆ ಹದಿಮೂರು ಶಾಸಕರನ್ನು ಬೋಪಯ್ಯ ಅನರ್ಹಗೊಳಿಸಿದ್ದರು. ಸ್ಪೀಕರ್‌ ಅವರ ಆದೇಶ ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್‌ಗೆ ಹೋದಾಗ ಸ್ಪೀಕರ್‌ ತೀರ್ಪು ಅಸಿಂಧು ಎಂಬ ತೀರ್ಪು ಬಂದಿತ್ತು.

ಸ್ಪೀಕರ್‌ ತೀರ್ಮಾನ ಒಪ್ಪಿದ್ದ ಮದ್ರಾಸ್‌ ಹೈಕೋರ್ಟ್‌

ಇನ್ನೊಂದು ಪ್ರಕರಣದಲ್ಲಿ, 2017ರಲ್ಲಿ 19 ಎಐಎಡಿಎಂಕೆ ಶಾಸಕರು ಮುಖ್ಯಮಂತ್ರಿ ಪಳನಿಸ್ವಾಮಿ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆದರೆ, ಪಕ್ಷ ಅವರೆಲ್ಲರನ್ನೂ ಅನರ್ಹಗೊಳಿಸಿ, ಸ್ಪೀಕರ್‌ಗೆ ದೂರು ನೀಡಿತ್ತು. ಸ್ಪೀಕರ್‌ ಒಬ್ಬರನ್ನು ಹೊರತುಪಡಿಸಿ 18 ಶಾಸಕರ ಸದಸ್ಯತ್ವವನ್ನು ರದ್ದುಪಡಿಸಿದ್ದರು. ಸ್ಪೀಕರ್‌ ಆದೇಶವನ್ನು ಪ್ರಶ್ನಿಸಿ ಈ ಶಾಸಕರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮದ್ರಾಸ್‌ ಹೈಕೋರ್ಟ್‌, ಸ್ಪೀಕರ್‌ ತೀರ್ಮಾನವನ್ನು ಎತ್ತಿಹಿಡಿದಿತ್ತು.