ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್‌ ಕಂಪನಿಗೆ ರಾಜ್ಯ ಸರ್ಕಾರ ಅತ್ಯಂತ ಕಡಿಮೆ ಬೆಲೆಗೆ 3667 ಎಕರೆ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿರುವುದು ದೊಡ್ಡ ವಿವಾದವಾಗಿದೆ. ವಿರೋಧ ಪಕ್ಷ ಬಿಜೆಪಿಯಷ್ಟೇ ಅಲ್ಲ, ಆಡಳಿತಾರೂಢ ಕಾಂಗ್ರೆಸ್‌ನ ಕೆಲ ನಾಯಕರೂ ಇದನ್ನು ವಿರೋಧಿಸುತ್ತಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈಗ ಕೇಳಿ ಬರುತ್ತಿರುವಂತೆ ಈ ವಿವಾದದ ಮೂಲ ಕೇವಲ 10 ವರ್ಷದ ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಕೈಗೊಂಡಿದ್ದ ನಿರ್ಧಾರದಲ್ಲಿ ಮಾತ್ರ ಇಲ್ಲ. ಬದಲಿಗೆ ಇದರ ಬೇರು 1970ರ ದಶಕದಲ್ಲಿದೆ. ಇದು ಇಂದಿರಾ ಗಾಂಧಿಯವರಿಗೂ ಸಂಬಂಧಪಟ್ಟವಿಷಯ! ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಇದು 1970 ರ ದಶಕದಲ್ಲಿ ಸಂಡೂರು ಭಾಗದಲ್ಲಿ ಕೇಳಿ ಬಂದ ಬಹುದೊಡ್ಡ ಜನಪರ ಕೂಗು! ರೈತರಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಕೂಡಲೇ ಉಕ್ಕು ಕೈಗಾರಿಕೆ ಸ್ಥಾಪಿಸಬೇಕು. ಉದ್ಯೋಗವಿಲ್ಲದೆ ಕಂಗಾಲಾಗಿರುವ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂಬ ಕಾಳಜಿಯ ಕೂಗು ಅದಾಗಿತ್ತು. ಕುಡುತಿನಿ, ಸಂಡೂರು ಸುತ್ತಮುತ್ತಲ ಪ್ರದೇಶಗಳ ಹತ್ತಾರು ಹಳ್ಳಿಗಳ ಜನರು ಕೈಗಾರಿಕೆ ಸ್ಥಾಪನೆಗೆ ಒತ್ತಾಯಿಸಿ ಹೋರಾಟದ ಹಾದಿ ಹಿಡಿದರು.

ಅಂದು ಚಳವಳಿಯ ನೇತೃತ್ವ ವಹಿಸಿದ್ದ ಕಮ್ಯುನಿಸ್ಟ್‌ ಪಕ್ಷದ ನಾಯಕ ದಿ.ಯು.ಭೂಪತಿ ಅವರು ನೂರಾರು ಯುವಕರ ಜೊತೆಯಲ್ಲಿ ತೋರಣಗಲ್ಲಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದರು. ಹೀಗೆ ಚಳವಳಿ ವಿವಿಧ ರೂಪದಲ್ಲಿ ವಿಸ್ತರಣೆಗೊಂಡು ಕೈಗಾರಿಕೆ ಸ್ಥಾಪನೆಯ ಒತ್ತಾಯದ ಧ್ವನಿ ಬಲಗೊಳ್ಳುತ್ತಲೇ ಬಂತು. ಕ್ರಮೇಣ ಸಾವಿರಾರು ಜನರು ಕೈಗಾರಿಕೆ ಸ್ಥಾಪನೆಗೆ ಬೀದಿಗಿಳಿದು ಹೋರಾಟ ತೀವ್ರಗೊಳಿಸಿದರು. ಕೈಗಾರಿಕೆಗಾಗಿ ನಡೆದ ಚಳವಳಿಯಲ್ಲಿ ಅನೇಕರು ಜೈಲು ಸೇರಿದರು.

ಹತ್ತಾರು ಜನರ ಮೇಲೆ ಪ್ರಕರಣಗಳು ದಾಖಲಾದವು. ಸ್ಥಳೀಯರ ಈ ಹೋರಾಟಕ್ಕೆ ಕಾರಣವೂ ಇತ್ತು. 1970ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ದೇಶದ ಮೂರು ಸ್ಥಳಗಳಲ್ಲಿ ಉಕ್ಕು ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡಿದ್ದರು. ಈ ಪೈಕಿ ಬಳ್ಳಾರಿಯೂ ಒಂದು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸುತ್ತಮುತ್ತಲ ಪ್ರದೇಶದಲ್ಲಿ ಸಿಗುವ ಉತ್ಕೃಷ್ಟಕಬ್ಬಿಣದ ಅದಿರಿನ ನಿಕ್ಷೇಪ, ಸಾರಿಗೆ ಸೌಕರ್ಯಕ್ಕಾಗಿ ಉತ್ತಮ ರಸ್ತೆ, ಕೈಗಾರಿಕೆ ಸ್ಥಾಪನೆಗೆ ತುಂಗಭದ್ರಾ ಜಲಾಶಯದಿಂದ ನೀರು ಸೌಲಭ್ಯದಿಂದಾಗಿ ಈ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಇಂದಿರಾ ಗಾಂಧಿ ಅವರೇ ತೋರಣಗಲ್ಲಿಗೆ ಆಗಮಿಸಿ ‘ವಿಜಯನಗರ ಉಕ್ಕು’ ಕೈಗಾರಿಕೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಆದರೆ, ಬಳಿಕ ಕೈಗಾರಿಕೆ ನಿರ್ಮಾಣದ ಯಾವ ಲಕ್ಷಣಗಳೂ ಕಂಡುಬರಲಿಲ್ಲ. ಇದರಿಂದ ಕುಪಿತರಾದ ಭೂಮಿ ನೀಡಿದ ರೈತರು ಕೈಗಾರಿಕೆ ಸ್ಥಾಪನೆಗಾಗಿ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು, ಎಡ ಪಕ್ಷಗಳ ನೇತೃತ್ವದಲ್ಲಿ ಹೋರಾಟಗಳನ್ನು ಶುರು ಮಾಡಿದರು. ಅಂದಿನ ಕೇಂದ್ರ ಮಂತ್ರಿಯಾಗಿದ್ದ ಬಸವರಾಜೇಶ್ವರಿ ಅವರು ಕೈಗಾರಿಕೆ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರಿದರು.

ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಮುಂದಾಗದ ಹಿನ್ನೆಲೆಯಲ್ಲಿ ಖಾಸಗಿ ಪಾಲುದಾರಿಕೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕೇಂದ್ರ ಅಸ್ತು ಎಂದಿತ್ತು. ಇದು ಸಂಡೂರು ಭಾಗದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ನಾಂದಿಯಾಯಿತು. ಶಂಕುಸ್ಥಾಪನೆಯ ಎರಡು ದಶಕಗಳ ಬಳಿಕ ಜಿಂದಾಲ್‌ ಸಂಸ್ಥೆ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂತು.

ಕೈಗಾರಿಕೆ ಸ್ಥಾಪನೆಯಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ರೈತರು ಭೂಮಿಗಳನ್ನು ನೀಡಲು ಮನಸ್ಸು ಮಾಡಿದರು. ಭೂಮಿ ನೀಡುವ ರೈತ ಕುಟುಂಬದ ಸದಸ್ಯರೊಬ್ಬರಿಗೆ ಕೆಲಸದ ಖಾತ್ರಿ ನೀಡಿದ್ದರಿಂದ ರೈತರಿಗೆ ಸಿಗುವ ಪರಿಹಾರದ ಹಣಕ್ಕಿಂತ ಉದ್ಯೋಗ ಸೃಷ್ಟಿಯ ಆಸೆ ಭೂಮಿ ನೀಡಲು ಪ್ರಮುಖ ಕಾರಣವಾಯಿತು.

ಮೊದಲು ಭೂಮಿ ನೀಡಿದ್ದು .45 ಸಾವಿರಕ್ಕೆ

ಕೈಗಾರಿಕೆ ಸ್ಥಾಪನೆ ಮಾಡಲು ಜಿಂದಾಲ್‌ ಮುಂದಾಗುತ್ತಿದ್ದಂತೆಯೇ ಅಂದರೆ 1995ರ ಮುಂಚೆ ತೋರಣಗಲ್‌ ಗ್ರಾಮದ ಬಳಿ 3,695 ಎಕರೆ ಭೂಮಿಯನ್ನು ಪ್ರತಿ ಎಕರೆಗೆ .45 ಸಾವಿರದಂತೆ ಸರ್ಕಾರ ಖರೀದಿಸಿ ಜಿಂದಾಲ್‌ಗೆ ಹಂಚಿಕೆ ಮಾಡಿತು. 1997-98ರಲ್ಲಿ 1.5 ಲಕ್ಷ ಟನ್‌ ಕಬ್ಬಿಣ ಉತ್ಪಾದನಾ ಘಟಕವಾಗಿ ಶುರುವಾದ ಜಿಂದಾಲ್‌ ಕಂಪನಿ ಇಂದು 11 ದಶಲಕ್ಷ ಟನ್‌ ಉಕ್ಕು ಉತ್ಪಾದಿಸುವ ದೇಶದ ಬೃಹತ್‌ ಕಂಪನಿಯಾಗಿ ಬೆಳೆದು ನಿಂತಿದೆ.

ಉಕ್ಕು, ವಿದ್ಯುತ್‌, ಸಿಮೆಂಟ್‌, ಪೇಂಟ್ಸ್‌, ಡಾಂಬರು ಉತ್ಪಾದನೆ

ಜಿಂದಾಲ್‌ ಕಂಪನಿ ಉಕ್ಕು ಉತ್ಪಾದನೆಗೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ವಿದ್ಯುತ್‌, ಸಿಮೆಂಟ್‌, ಪೇಂಟ್ಸ್‌, ಡಾಂಬರು ಸೇರಿದಂತೆ ವಿವಿಧ ವಲಯಗಳಲ್ಲಿ ತನ್ನ ಉತ್ಪಾದನಾ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಈ ಪೈಕಿ ಇಸಿಪಿಎಲ್‌ (ಎಪ್ಸಿಲಾನ್‌) ಡಾಂಬರ್‌ ಕಾರ್ಖಾನೆಗೆ ಸ್ಥಳೀಯರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಅದರ ನಡುವೆಯೂ ಜಿಂದಾಲ್‌ ಸಂಸ್ಥೆ ಡಾಂಬರ್‌ ಕಾರ್ಖಾನೆಯನ್ನು ಮುಂದುವರಿಸಿದೆ. ಈ ಡಾಂಬರ್‌ ಕಾರ್ಖಾನೆಯನ್ನು ಮೊದಲು ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಶುರುಮಾಡಲು ನಿರ್ಧರಿಸಲಾಗಿತ್ತು. ಅಲ್ಲಿನ ಜನರ ಹೋರಾಟದ ಫಲವಾಗಿ ಎತ್ತಂಗಡಿಯಾಗಿ ಬಳ್ಳಾರಿಗೆ ಬಂದು ನೆಲೆಸಿತು.

ಕೈಗಾರಿಕೆ ಸ್ಥಾಪನೆ ಬಳಿಕ ಸುತ್ತಮುತ್ತಲ ಹಳ್ಳಿಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಇದಕ್ಕೆ ಕಿವಿಗೊಡದೆ ಇರುವುದರಿಂದ ಕಾರ್ಖಾನೆ ಸ್ಥಗಿತಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೋರಾಟಗಾರರು ಹೇಳುತ್ತಾರೆ.

ಜಿಂದಾಲ್‌ ಬಗ್ಗೆ ಸ್ಥಳೀಯರ ಅಪಸ್ವರ ಏನು?

ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯಿಂದಾಗಿಯೇ ಕೈಗಾರಿಕೆ ಸ್ಥಾಪನೆಗೆ ರೈತರ ಭೂಮಿ ನೀಡಲಾಯಿತು. ಆದರೆ, ಇಲ್ಲಿ ಸ್ಥಳೀಯರಿಗಿಂತಲೂ ಹೊರ ರಾಜ್ಯಗಳ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅರ್ಹತೆಗೆ ತಕ್ಕಂತೆ ಕೆಲಸ ನೀಡಲಾಗಿಲ್ಲ ಎಂಬ ದೂರುಗಳಿವೆ.

ಈವರೆಗೆ ಜಿಂದಾಲ್‌ ಕಂಪನಿ ಸ್ಥಳೀಯರಿಗೆ ನೀಡಿರುವ ಉದ್ಯೋಗ ಎಷ್ಟುಎಂಬುದನ್ನು ಬಹಿರಂಗಪಡಿಸಿಲ್ಲ. ಜಿಂದಾಲ್‌ ಪರವಾಗಿ ನಿಂತಿರುವ ಕೆಲ ಜನಪ್ರತಿನಿಧಿಗಳು ಸುಮಾರು 25 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ಖಚಿತಪಡಿಸುವವರು ಯಾರು ಎಂದು ಹೋರಾಟಗಾರರು ಪ್ರಶ್ನಿಸುತ್ತಾರೆ.

ಜಿಂದಾಲ್‌ ಕಂಪನಿಯಲ್ಲಿ ಕಾರ್ಮಿಕರು ಸಂಘಟನೆಗೊಳ್ಳಲು ಅವಕಾಶ ನೀಡಿಲ್ಲ. ಇದರಿಂದ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಜಿಂದಾಲ್‌ನಲ್ಲಿ ಕಾರ್ಮಿಕ ಸಂಘಟನೆ ಸ್ಥಾಪಿಸಲು ಮುಂದಾದ ಟ್ರೇಡ್‌ ಯೂನಿಯನ್‌ಗಳು ಸೋಲುಂಡಿವೆ. ಹೀಗಾದರೆ ಕಾರ್ಮಿಕರ ಹಿತ ಕಾಯುವವರು ಯಾರು ಎಂಬ ಪ್ರಶ್ನೆಗಳೆದ್ದಿವೆ.

ಈ ಹಿಂದೆಯೇ ಜಿಂದಾಲ್‌ಗೆ ನೀಡಿದ್ದು 11,400 ಎಕ್ರೆ!

- 1995ಕ್ಕಿಂತ ಮುಂಚೆ ತೋರಣಗಲ್‌ ಗ್ರಾಮದ ಬಳಿ 3,695 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಮೊದಲ ಬಾರಿ ಜಿಂದಾಲ್‌ಗೆ ನೀಡಿತ್ತು.

- 1996ರ ಜೂನ್‌ 17ರಲ್ಲಿ 3430.16 ಎಕರೆ ಭೂಮಿಯನ್ನು ಲೀಸ್‌ ಕಂ ಸೇಲ್‌ಗೆ 10 ವರ್ಷಗಳ ಗುತ್ತಿಗೆ ಅವಧಿಗೆ ಅಗ್ರಿಮೆಂಟ್‌ ಮಾಡಿಕೊಳ್ಳಲಾಯಿತು. 2005ರ ಸೆ.9ಕ್ಕೆ ಅಬ್ಸಲ್ಯೂಟ್‌ ಸೇಲ್‌ ಡೀಡ್‌ (ಶುದ್ಧ ಕ್ರಯಪತ್ರ) ಮಾಡಲಾಯಿತು.

- 2004ರ ಏಪ್ರಿಲ್‌ 15ರಂದು 615 ಎಕರೆಯನ್ನು 6 ವರ್ಷಗಳ ಗುತ್ತಿಗೆ ಅವಧಿಗೆ ಲೀಸ್‌ ಕಂ ಸೇಲ್‌ ಅಗ್ರಿಮೆಂಟ್‌ ಮಾಡಲಾಯಿತು. 2010ರ ಏ. 15ರಂದು ಅಬ್ಸಲ್ಯೂಟ್‌ ಸೇಲ್‌ ಡೀಡ್‌ ಆಯಿತು.

- 2006ರ ಆ.3ರಂದು 2000.58 ಎಕರೆಯನ್ನು 6 ವರ್ಷಗಳ ಗುತ್ತಿಗೆ ಅವಧಿಗೆ ಲೀಸ್‌ ಕಂ ಸೇಲ್‌ ಅಗ್ರಿಮೆಂಟ್‌ ಮಾಡಲಾಯಿತು. 2019ರ ಮೇ 27ರಂದು ಅಬ್ಸಲ್ಯೂಟ್‌ ಸೇಲ್‌ ಡೀಡ್‌ ಆಯಿತು.

- 2007ರ ಅ.24ರಲ್ಲಿ 1666.67 ಎಕರೆಯನ್ನು 10 ವರ್ಷಗಳ ಗುತ್ತಿಗೆ ಅವಧಿಗೆ ಲೀಸ್‌ ಕಂ ಸೇಲ್‌ ಅಗ್ರಿಮೆಂಟ್‌ ಮಾಡಲಾಯಿತು. 2019ರ ಮೇ 27ರಂದು ಅಬ್ಸಲ್ಯೂಟ್‌ ಸೇಲ್‌ ಡೀಡ್‌ ದಿನಾಂಕವಿತ್ತು.

ಈಗ ಎದ್ದಿರುವ ವಿವಾದ ಏನು?

ಇಲ್ಲಿಯವರೆಗೆ ರಾಜ್ಯ ಸರ್ಕಾರ ಜಿಂದಾಲ್‌ಗೆ ನೀಡಿರುವ 11,400 ಎಕರೆಯಲ್ಲದೆ ಈಗ ಮತ್ತೆ ಹೊಸತಾಗಿ 3,667 ಎಕರೆ ಭೂಮಿಯನ್ನು ನೀಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಸೇರಿದಂತೆ ಅನೇಕ ಪ್ರಗತಿಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಜಿಂದಾಲ್‌ಗೆ ಭೂಮಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರ ಭೂಮಿಯನ್ನು ಜಿಂದಾಲ್‌ಗೆ ಮಾರಾಟ ಮಾಡುವುದು ಸರಿಯಲ್ಲ. ಲೀಸನ್ನೇ ಮುಂದುವರಿಸಬೇಕು.

ಹಾಗಾದರೆ ಮಾತ್ರ ಕಂಪನಿ ಸರ್ಕಾರದ ಹಿಡಿತದಲ್ಲಿರುತ್ತದೆ ಎಂಬುದು ಹೋರಾಟಗಾರರ ವಾದ. ಇದಕ್ಕೆ ಒಪ್ಪದ ಜಿಂದಾಲ್‌ ಕಂಪನಿ ಹಾಗೂ ಜಿಂದಾಲ್‌ ಪರವಾಗಿ ಧ್ವನಿ ಎತ್ತುತ್ತಿರುವ ಜನಪ್ರತಿನಿಧಿಗಳು, ಈ ಹಿಂದೆ ಅನೇಕ ಬಾರಿ ಲೀಸ್‌ ಬಳಿಕ ಶುದ್ಧಕ್ರಯ ವಿಕ್ರಯ ಮಾಡಿಕೊಳ್ಳಲಾಗಿದೆ. ಜಿಂದಾಲ್‌ ಸಂಸ್ಥೆ ತನಗೆ ಗುತ್ತಿಗೆಗೆ ನೀಡಿದ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಸಿದೆ. ಸರ್ಕಾರದ ನಿಯಮದಂತೆ ಗುತ್ತಿಗೆ ಅವಧಿ ನಂತರ ನೇರ ಮಾರಾಟ ಮಾಡುವ ಅಧಿಕಾರ ಸರ್ಕಾರಕ್ಕಿದೆ.

ಕರ್ನಾಟಕ ಗೃಹ ಮಂಡಳಿ ಮತ್ತಿತರ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡಿದಾಗ ಆರಂಭದಲ್ಲಿ ಲೀಸ್‌ ಕಂ ಸೇಲ್‌ ಮಾಡಿ ಗುತ್ತಿಗೆ ಅವಧಿ ಬಳಿಕ ನಿಯಮಾನುಸಾರ ಅಬ್ಸಲ್ಯೂಟ್‌ ಸೇಲ್‌ ಮಾಡಿಕೊಡುತ್ತದೆ. ಅಂತೆಯೇ ಇದು ಕೂಡ ಲೀಸ್‌ ಅವಧಿ ಮುಗಿದಿದ್ದು, ಶುದ್ಧ ಕ್ರಯಪತ್ರ ಮಾಡಿಕೊಡಬೇಕಾಗಿದೆ ಎಂದು ವಾದಿಸುತ್ತಾರೆ.

ಜಿಂದಾಲ್‌ ಕಂಪನಿ ಮೂಲ ಒಪ್ಪಂದದಂತೆ ಬರೀ ಉಕ್ಕು ಉತ್ಪಾದನೆ ಮಾಡಿದ್ದರೆ ಹೆಚ್ಚಿನ ಭೂಮಿ ಬೇಕಾಗಿರಲಿಲ್ಲ. ಬೇರೆ ಬೇರೆ ಘಟಕಗಳನ್ನು ಆರಂಭಿಸಿ ಭೂಮಿ ಕೇಳುತ್ತ ಬಂದಿರುವುದು ಮತ್ತು ಆ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಿಕೊಡಲು ಸರ್ಕಾರ ಮುಂದಾಗಿರುವುದು ಈಗಿನ ವಿವಾದಕ್ಕೆ ಕಾರಣ ಎನ್ನಲಾಗಿದೆ.

- ಕೆ ಎಂ ಮಂಜುನಾಥ್ ಬಳ್ಳಾರಿ