ಬೆಂಗಳೂರು :  ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಕೃತ್ಯವನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸಂಘಟನೆಗಳ ಒಕ್ಕೂಟ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

ಅಬೀಬ್‌ ಮಲ್ಲಿಕ್‌, ಅಬ್ದುಲ್‌ ಹನೀಫ್‌, ಸುಲ್ತಾನ್‌ ಅಹ್ಮದ್‌, ಸಲ್ಮಾನ್‌ ನಿಸಾರ್‌, ಅಮೀರ್‌ ಷರೀಫ್‌ ಹಾಗೂ ಉಮೇರ್‌ ಘೋಷ್‌ ಎಂಬ ವ್ಯಕ್ತಿಗಳು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಯೋಧರ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್‌ ಮಾಡಿದ್ದು, ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ನಾಗೇಶ್‌ ಎಂಬುವರು ದೂರು ನೀಡಿದ್ದಾರೆ.

ವಕೀಲರಿಂದ ದೂರು:

ಪುಲ್ವಾಮಾದಲ್ಲಿ ದಾಳಿಯನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಜಮ್ಮು-ಕಾಶ್ಮೀರ ಮೂಲದ ಅಬೀದ್‌ ಮಲಿಕ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಉಮೇಶ್‌ ಕುಮಾರ್‌ ಶನಿವಾರ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ಮಾಡಿದ ಉಗ್ರನ ಪರವಾಗಿ ಪೋಸ್ಟ್‌ ಪ್ರಕಟ ಮಾಡಿರುವ ಅಬೀದ್‌ ಮಲಿಕ್‌, ಉಗ್ರನ ಫೋಟೋ ಹಾಕಿ ಆತನ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿ ಇದು ನಿಜವಾದ ಸರ್ಜಿಕಲ… ಅಟ್ಯಾಕ್‌ ಎಂದು ಬರೆದುಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.