ವೈದ್ಯರ ಮುಷ್ಕರದಿಂದ 51 ರೋಗಿಗಳು ಸಾವು | ವೀರಣ್ಣ, ರವೀಂದ್ರ ವಜಾಗೆ ಆಗ್ರಹ| ವೈದ್ಯ ಪರಿಷತ್‌ಗೆ ನ್ಯಾಯವಾದಿ ಶರ್ಮಾ ದೂರು

ಬೆಂಗಳೂರು: ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಿದ ಪರಿಣಾಮ 51 ಜನ ಸಾವಿಗೀಡಾಗಿದ್ದಾರೆ. ಹೀಗಾಗಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಹಾಗೂ ಗೌರವ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರಿನ ವಕೀಲ ಎಸ್. ನಟರಾಜ್ ಶರ್ಮ ಅವರು ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ದೂರು ನೀಡಿದ್ದಾರೆ.

‘ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿರುವ ಡಾ.ರವೀಂದ್ರ ಮತ್ತು ಗೌರವ ಕಾರ್ಯದರ್ಶಿ ಬಿ.ವೀರಣ್ಣ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು. 51 ಜನ ಸಾವಿಗೆ ಅವರನ್ನೇ ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡಬೇಕು. ಮುಷ್ಕರಿಂದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದವರ ಕುಟುಂಬ ವರ್ಗಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ.

ದೂರು ಸ್ವೀಕರಿಸಿದ ಕರ್ನಾಟಕ ವೈದ್ಯಕೀಯ ಪರಿಷತ್ತು ಅಧ್ಯಕ್ಷರ ಡಾ.ಎಚ್. ವೀರಭದ್ರಪ್ಪ ಅವರು ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅದು ಸೋಮವಾರ ಮತ್ತೆ ಹೈಕೋರ್ಟ್‌ನಲ್ಲಿ ವಿಚಾರಣೆ ಬರಲಿದೆ. ಹೈಕೋರ್ಟ್ ತೀರ್ಮಾನವನ್ನು ನೋಡಿಕೊಂಡು ದೂರಿನ ಕುರಿತು ಮುಂದಿನ ಕ್ರಮ ಜರುಗಿಸಲಾಗುವುದು ಎಂಬುದಾಗಿ ತಮಗೆ ಭರವಸೆ ನೀಡಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.