ಅಧ್ಯಕ್ಷರಾದ ದಿನವೇ ಉಕ್ರೇನ್‌ ಸಂಸತ್ತು ವಿಸರ್ಜಿಸಿದ ಜೆಲೆನ್‌ಸ್ಕಿ!| ಮುಂದಿನ 5 ವರ್ಷ ದೇಶವನ್ನು ನಗೆಗಡಲಲ್ಲೇ ತೇಲಿಸುವೆ| ದೇಶ ಯಾವುದೇ ಸಂಕಷ್ಟಕ್ಕೀಡಾಗದಂತೆ ನೋಡಿಕೊಳ್ಳುವೆ| ದೇಶವನ್ನುದ್ದೇಶಿಸಿ ನೂತನ ಅಧ್ಯಕ್ಷ ಜೆಲೆನ್‌ಸ್ಕಿ ವಾಗ್ದಾನ

ಕೀವ್‌[ಮೇ.21]: ಉಕ್ರೇನ್‌ನ ಕಿರುತೆರೆ ಸ್ಟಾರ್‌ ಆದ ವೊಲಿಡಿಮಿರ್‌ ಜೆಲೆನ್‌ಸ್ಕಿ ಅವರು ಉಕ್ರೇನ್‌ ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪದಗ್ರಹಣ ಸ್ವೀಕರಿಸಿ ದೇಶವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡುತ್ತಿರುವಾಗಲೇ, ‘ನಾಟಕೀಯ ರೀತಿಯಲ್ಲಿ ಉಕ್ರೇನ್‌ ಸಂಸತ್ತನ್ನೇ ವಿಸರ್ಜನೆ ಮಾಡಿದ್ದಾರೆ. ಅಲ್ಲದೆ, ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಆಕಾಂಕ್ಷೆ ಉಳ್ಳವರೆಲ್ಲರೂ ರಾಜಕೀಯಕ್ಕೆ ಆಗಮಿಸಬೇಕು,’ ಎಂದು ಕರೆ ನೀಡಿದರು.

ತಮ್ಮ ಭಾಷಣ ಮುಂದುವರಿಸಿದ ಜೆಲೆನ್‌ಸ್ಕಿ ಅವರು, ‘ದೇಶದ ಪೂರ್ವ ಭಾಗದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಜೊತೆಗಿನ ಯುದ್ಧವನ್ನು ನಿಲ್ಲಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಅಲ್ಲದೆ, ಈ ಸಂಸತ್ತಿನಲ್ಲಿ ಸ್ವಯಂ ಪುಷ್ಟೀಕರಣದಲ್ಲಿ ತೊಡಗಿದ ತಂಡವಿದೆ. ಹೀಗಾಗಿ, ತಕ್ಷಣದಿಂದಲೇ ಅನ್ವಯವಾಗುವಂತೆ ಸಂಸತ್ತು ವಿಸರ್ಜಿಸುತ್ತಿದ್ದೇನೆ,’ ಎಂದು ಹೇಳಿದ್ದಾರೆ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಉಕ್ರೇನ್‌ ಸಂಸತ್ತಿಗೆ ಚುನಾವಣೆ ನಡೆಯಬೇಕಿತ್ತು.

ಏಪ್ರಿಲ್‌ ತಿಂಗಳಲ್ಲಿ ನಡೆದ ಉಕ್ರೇನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆಲೆನ್‌ಸ್ಕಿ ಅವರು 2014ರಿಂದಲೂ ಅಧಿಕಾರದಲ್ಲಿದ್ದ ಪೀಟ್ರೋ ಪೊರೊಶೆಂಕೊ ಅವರಿಗೆ ಶೇ.73 ಮತಗಳ ಭಾರೀ ಅಂತರದಿಂದ ಸೋಲುಣಿಸಿದ್ದರು.

ದೇಶವನ್ನು ನಗೆಗಡಲಲ್ಲಿ ತೇಲಿಸಲು ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ಮುಂದಿನ 5 ವರ್ಷಗಳ ನನ್ನ ಆಡಳಿತಾವಧಿಯಲ್ಲಿ ಇಡೀ ಉಕ್ರೇನ್‌ ಎಂದಿಗೂ ಸಂಕಷ್ಟಕ್ಕೀಡಾಗಿ ದುಃಖದ ಪರಿಸ್ಥಿತಿಗೆ ಒಳಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಜೆಲೆನ್‌ಸ್ಕಿ ಅವರು ಹೇಳಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.