ತಿರುವನಂತಪುರಂ :  ಕೇರಳದ ಹನನ್ ಹಮೀದ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದ್ದಾಳೆ. ಇಲ್ಲಿನ ಖಾಸಗಿ ಕಾಲೇಜೊಂದರಲ್ಲಿ ತೃತೀಯ ವರ್ಷದ ಬಿಎಸ್ ಸಿ ಅಧ್ಯಯನ ಮಾಡುತ್ತಿರುವ ಹನನ್ ಪ್ರತಿನಿತ್ಯವೂ ಕೂಡ ಕಾಲೇಜು ಮುಗಿಸಿಕೊಂಡು ಬಂದು ತಮ್ಮನಮ್ ಪ್ರದೇಶದಲ್ಲಿ ಮೀನು ಮಾರಾಟ ಮಾಡಿ ಸಂಜೆ 7 ಗಂಟೆ ಸುಮಾರಿಗೆ  ಮನೆಗೆ ತೆರಳುತ್ತಿದ್ದಳು. 

ಕೆಲ ದಿನ ಕಾಲೇಜು ಸಮವಸ್ತ್ರದಲ್ಲಿಯೇ ಆಕೆ ಮೀನುಮಾರುತ್ತಿರುವುದನ್ನು ಕಂಡ ಮಲಯಾಳಂ ಪತ್ರಿಕೆಯೊಂದು ಆಕೆಯ ಸಂದರ್ಶನ ಮಾಡಿ ಪತ್ರಿಕೆಯಲ್ಲಿ ಸಮವಸ್ತ್ರದಲ್ಲಿಯೇ ಮೀನು ಮಾರುತ್ತಿದ್ದ  ಫೊಟೊವನ್ನೇ ಪ್ರಕಟ ಮಾಡಿತ್ತು. 

ಅದಾದ ಬಳಿಕ ವಿವಿಧ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳ ಪತ್ರಕರ್ತರೂ ನಿತ್ಯವೂ ಬಂದು ಆಕೆಯ ಸಂದರ್ಶನ ಮಾಡಲಾರಂಭಿಸಿದರು. ಮಾಧ್ಯಮದಲ್ಲಿ ಯಾವಾಗ ಆಕೆ ಕಾಣಿಸಿಕೊಂಡಳೋ ಆಗ ಆಕೆಯನ್ನು ಭೇಟಿ ಮಾಡಲು ಬರುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಲೇ  ಹೋಯ್ತು. 

ಮೀನು ಕೊಳ್ಳುವುದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದ ಆಕೆಯನ್ನು ನೋಡಲು ಬರುವವರ ಸಂಖ್ಯೆಯು ಹೆಚ್ಚಾಗುತ್ತಲೇ ಆಕೆ ಮೀನು ಮಾರುತ್ತಿದ್ದ ತಮ್ಮನಮ್ ಪ್ರದೇಶದಲ್ಲಿ ಟ್ರಾಫಿಕ್ ಜಾಂ ವಿಪರೀತವಾಗುತ್ತಾ ಸಾಗಿತ್ತು. ನಿತ್ಯ ಟ್ರಾಫಿಕ್ ಜಾಂ ನಿಯಂತ್ರಣ ಮಾಡುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿ, ಆಕೆ ಮೀನು ಮಾರಾಟ ಮಾಡಬಾರದು ಎಂದು ಪೊಲೀಸರು ನಿರ್ಬಂಧ ಹೇರಿದರು. 

ಎಂಬಿಬಿಎಸ್ ಮಾಡುವ ಕನಸನ್ನು ಹೊಂದಿದ್ದ ಆಕೆ ಪ್ರತಿನಿತ್ಯ ಮಾರುಕಟ್ಟೆಗೆ ತೆರಳಿ ಮೀನುಮಾರಿ ತನ್ನ ವಿದ್ಯಾಭ್ಯಾಸದ ಖರ್ಚನ್ನು ನಿರ್ವಹಿಸುತ್ತಿದ್ದಳು. ಆದರೆ ಇಂತಹ ಬೆಳವಣಿಗೆಗಳಿಂದ ಆಕೆಯ ಕೆಲಸಕ್ಕೆ ಬ್ರೇಕ್ ಬಿದ್ದಂತಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಹನನ್ ಗೆ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರಿಂದ  ಬೆಂಬಲ ವ್ಯಕ್ತವಾಗಿದೆ.  

ಇನ್ನೊಂದು ಕಡೆ ಆಕೆ ಮಲಯಾಳಂ ಚಿತ್ರವೊಂದರ ಪ್ರಚಾರಕ್ಕೆ ಹೀಗೆ ಮಾಡಿದ್ದಾಳೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. 

(ಫೊಟೊ ಮತ್ತು ಮೂಲ ಸುದ್ದಿ - ಟೈಮ್ಸ್ ಆಫ್ ಇಂಡಿಯಾ)