ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಈಗಾಗಲೇ ಕೇಸ್ ದಾಖಲಿಸಿಕೊಂಡಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಬ್ಬನ ಸುಳಿವು ಸಿಕ್ಕಿದ್ದು, ಆರೋಪಿಗಳ ವಿರುದ್ದ 307 ಕೇಸ್ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಶಿವಮೊಗ್ಗ(ಡಿ.16): ಕಾಲೇಜು ವಿದ್ಯಾರ್ಥಿಗಳ ಗಲಾಟೆ ರಾಜಕೀಯ ಬಣ್ಣಪಡೆದಿದ್ದು, ಹಲ್ಲೆ ನಡೆಸಿದ ಯುವಕರನ್ನು ಶೀಘ್ರವೇ ಬಂಧಿಸುವಂತೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮುಂತಾದ ಮುಖಂಡರು ಎಸ್ಪಿಗೆ ಮನವಿ ಮಾಡಿಕೊಂಡಿದ್ದಾರೆ.
ಶುಕ್ರವಾರ ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಗಲಾಟೆ ಸಂಭವಿಸಿತ್ತು. ಆಗ ಅನ್ಯ ಕೋಮಿನ ಸಮುದಾಯದ ನಾಲ್ವರು ಯುವಕರ ಮೇಲೆ ಹತ್ತಾರು ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಇದೇ ದಿನ ಸಂಜೆ ಇದೇ ಕಾಲೇಜಿನ ವಿದ್ಯಾರ್ಥಿಗಳು ಗಾಂಧಿ ಪಾರ್ಕಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಆಗಮಿಸಿದ ಹಲ್ಲೆಗೊಳಗಾದ ಯುವಕರ ಬೆಂಬಲಿಗರಾದ ಮೂವರು ಗುಂಪು ಅವರ ಮೇಲೆ ಹಲ್ಲೆ ಮಾಡಿತ್ತು. ಅವರ ಜತೆಗೆ ಇದ್ದ ಬೇರೆ ಕಾಲೇಜಿನ ಶಬರೀಶ (18 ವರ್ಷ) ಎಂಬ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದಿತ್ತು.
ಯುವಕ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ ನಂತರ ವಿಷಯ ತಿಳಿದು ಆತನ ಮನೆಗೆ ಹೋಗಿದ್ದ ಪೊಲೀಸರು ಶಬರೀಶನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರು. ಅಷ್ಟರಲ್ಲಾಗಲೇ ವಿಷಯ ಎಲ್ಲೆಡೆ ಹರಡಿದ್ದು, ಬಿಜೆಪಿ ಮುಖಂಡರು ಶಬರೀಶನ ಮನೆಗೆ ತೆರಳಿ, ಆತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಶುಕ್ರವಾರ ತಡರಾತ್ರಿ ಆಸ್ಪತ್ರೆ ಎದುರು ಬಿಜೆಪಿ ಹಾಗೂ ಸಂಘಪರಿವಾರದ ಹಲವರು ನೆರೆದಿದ್ದರಿಂದ ಉದ್ವಿಗ್ನ ವಾತಾರವಣ ಉಂಟಾಗಿತ್ತು. ಸ್ಥಳಕ್ಕೆ ಎಸ್ಪಿ ಅಭಿನವ್ ಖರೆ ಅವರು ಆಗಮಿಸಿದಾಗ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಬಿಜೆಪಿ ಹಾಗೂ ಸಂಘಪರಿವಾರ ಮುಖಂಡರು, ಶನಿವಾರ ಬೆಳಿಗ್ಗೆ 10 ಗಂಟೆಯೊಳಗೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ತಾಕೀತು ಮಾಡಿದ್ದರು.ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿರುವ ಗೂಂಡಾಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಈಗಾಗಲೇ ಕೇಸ್ ದಾಖಲಿಸಿಕೊಂಡಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಬ್ಬನ ಸುಳಿವು ಸಿಕ್ಕಿದ್ದು, ಆರೋಪಿಗಳ ವಿರುದ್ದ 307 ಕೇಸ್ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
