ಬೆಂಗಳೂರು(ನ. 21) ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ತನ್ನನ್ನು ಕೈಬಿಡಬೇಕು ಎಂದು ಅನರ್ಹ ಶಾಸಕ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ರಿಂದ ಆದೇಶ ನೀಡಿದ್ದಾರೆ.  ಪ್ರಕರಣವನ್ನ ರದ್ದುಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿ  ವಜಾ ಮಾಡಲಾಗಿದೆ.

ಅರ್ಜಿ ವಜಾಗೊಳಿಸಿ, ಸಾಕ್ಷಿಗಳ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ತಿಳಿಸಿದೆ. 2018 ರ ವಿಧಾನಸಭೆ ಎಲೆಕ್ಷನ್ ನೀತಿ ಸಂಹಿತೆ ಉಲ್ಲಂಘನೆ ಆರೋಪ‌ ಪ್ರಕರಣ ಇದಾಗಿದ್ದು  ಎಲೆಕ್ಷನ್ ಸ್ಕ್ವಾಡ್ ಪರಿಶೀಲನೆ ವೇಳೆ ಮುನಿರತ್ನ ಭಾವಚಿತ್ರದ ಟೀ ಶರ್ಟ್ ಗಳು ಪತ್ತೆಯಾಗಿದ್ದವು.  95 ಲಕ್ಷ ಮೌಲ್ಯದ ಟೀ ಶರ್ಟ್ ಗಳು ಪತ್ತೆಯಾಗಿದ್ದವು.  ಪ್ರಕರಣದ ಸಾಕ್ಷಿಗಳ ವಿಚಾರಣೆಯನ್ನು  ಡಿಸೆಂಬರ್ 11 ಕ್ಕೆ ನ್ಯಾಯಾಲಯ ಮುಂದೂಡಿದೆ. 

ಬಿಜೆಪಿಗೆ ಬಂದರೂ ಮುನಿರತ್ನಗೆ ತಪ್ಪದ ಕಾಟ

 ಕಾಂಗ್ರೆಸ್ ನಿಂದ ಸ್ಪರ್ಧಿಸಿ ಆರ್ ಆರ್ ನಗರದಲ್ಲಿ ಜಯ ಸಾಧಿಸಿದ್ದ ಮುನಿರತ್ನ ಬದಲಾದ ರಾಜಕಾರಣದ ವಾತಾವರಣದಲ್ಲಿ 17 ಜನ ಶಾಸಕರೊಂದಿಗೆ ಸೇರಿ ರಾಜೀನಾಮೆ ನೀಡಿದ್ದರು. ಇವರೆಲ್ಲರ ರಾಜೀನಾಮೆ ಪರಿಣಾಮದಿಂದಲೇ ಚಾಲ್ತಿಯಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿತ್ತು.

ಇದೀಗ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 5 ಕ್ಕೆ ಮತದಾನ ನಡೆಯಲಿದ್ದು  ಡಿ. 9ಕ್ಕೆ ಫಲಿತಾಂಶ ಹೊರಬೀಳಲಿದೆ. ಕಳೆದ 2018 ರ ವಿಧಾನಸಭೆ ಚುನಾವಣೆ ವೇಳೆ ಆರ್ ಆರ್ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ನಕಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿತ್ತು. ಈ ಪ್ರಕರಣದ ಕಾರಣಕ್ಕೆ ಆರ್ ಆರ್ ನಗರ ಉಪಚುನಾವಣೆಗೆ ತಡೆ ಬಿದ್ದಿದೆ.