ಏನು ಕಾರಣ?1. ರಾಜ್ಯದಲ್ಲಿ ಬರ ಇದೆ. ಬಹುರಾಷ್ಟ್ರೀಯ ಕಂಪನಿಗಳು ಕೋಲಾಕ್ಕಾಗಿ ನೀರು ದುರ್ಬಳಕೆ ಮಾಡಿಕೊಳ್ಳುತ್ತಿವೆ.2. ಪೆಪ್ಸಿ, ಕೋಕಕೋಲಾದಿಂದ ದೇಶೀ ಕಂಪನಿಗಳು ನಾಶ. ಅವುಗಳ ಮಾರಾಟದಿಂದ ವರ್ತಕರಿಗೆ ಲಾಭವೂ ಕಡಿಮೆ3. ಕೋಲಾಗಳಿಂದ ಆರೋಗ್ಯಕ್ಕೆ ಹಾನಿ. ದೇಶೀ ಪೇಯಗಳು ಅಗ್ಗ. ಅಲ್ಲದೆ, ಅವುಗಳಿಂದ ಆರೋಗ್ಯಕ್ಕೆ ಹಾನಿಯಿಲ್ಲ
ಚೆನ್ನೈ(ಮಾ.01): ವಿಶ್ವಪ್ರಸಿದ್ಧ ತಂಪುಪಾನೀಯ ಬ್ರ್ಯಾಂಡ್‌ಗಳಾದ ಪೆಪ್ಸಿ ಹಾಗೂ ಕೋಕಾ ಕೋಲಾಕ್ಕೆ ತಮಿಳುನಾಡಿನಾದ್ಯಂತ ಬುಧವಾರದಿಂದಲೇ ಬಹಿಷ್ಕಾರ ಆರಂಭವಾಗಿದೆ. ಇದರಿಂದಾಗಿ ಆ ಎರಡೂ ಕಂಪನಿಗಳಿಗೆ 1400 ಕೋಟಿ ರು. ನಷ್ಟದ ಭೀತಿ ಶುರುವಾಗಿದೆ.
ತಮಿಳುನಾಡಿನಾದ್ಯಂತ ಇರುವ ಸಣ್ಣ ಅಂಗಡಿ ಹಾಗೂ ಚಿಲ್ಲರೆ ಮಳಿಗೆಗಳು ಪೆಪ್ಸಿ, ಕೋಕ್‌ಗೆ ಬುಧವಾರದಿಂದ ಬಹಿಷ್ಕಾರ ಹಾಕಿವೆ ಎಂದು 6000 ಸಣ್ಣ-ಮಧ್ಯಮ ಉದ್ದಿಮೆಗಳು ಹಾಗೂ 15 ಲಕ್ಷ ಸದಸ್ಯರನ್ನು ಹೊಂದಿರುವ ತಮಿಳುನಾಡು ವನಿಗರ್ ಸಂಘಂ ತಿಳಿಸಿದೆ. ಜತೆಗೆ 5 ಸಾವಿರದಷ್ಟಿರುವ ಸೂಪರ್ ಮಾರ್ಕೆಟ್ ಹಾಗೂ ರೆಸ್ಟೋರೆಂಟ್‌ಗಳು ಬಹಿಷ್ಕಾರಕ್ಕೆ ಸಮಯಾವಕಾಶ ಕೇಳಿವೆ ಎಂದು ಹೇಳಿದ್ದಾರೆ.
ತಮಿಳುನಾಡು ಭೀಕರ ಬರಗಾಲಕ್ಕೆ ತುತ್ತಾಗಿದೆ. ಈ ಕಂಪನಿಗಳು ಸ್ಥಳೀಯ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಜತೆಗೆ ಪೆಪ್ಸಿ ಹಾಗೂ ಕೋಕ್‌ನಿಂದಾಗಿ ದೇಶೀಯ ಕಂಪನಿಗಳು ನಾಶಗೊಳ್ಳುತ್ತಿವೆ. ಆ ಪಾನೀಯಗಳನ್ನು ಮಾರಿದರೆ ಹೆಚ್ಚು ಹಣವೂ ಸಿಗುವುದಿಲ್ಲ. ಭಾರತೀಯ ಪಾನೀಯಗಳು ಅಗ್ಗದ ಬೆಲೆಗೆ ಸಿಗುವುದಲ್ಲದೆ, ಅವು ಆರೋಗ್ಯಕಾರಿಯಾಗಿವೆ ಎಂಬ ಕಾರಣವನ್ನು ವ್ಯಾಪಾರಿಗಳು ನೀಡಿದ್ದಾರೆ.
ಈ ಹಿಂದೆ ಜಲ್ಲಿಕಟ್ಟು ಪ್ರತಿಭಟನೆ ವೇಳೆಯೇ ಇಂಥದ್ದೊಂದು ಬೇಡಿಕೆ ಕೇಳಿಬಂದಿತ್ತು. ಅದೀಗ ಜಾರಿಯಾಗಿದೆ. ವಿದೇಶಿ ತಂಪುಪಾನೀಯ ಮೇಲೆ ಬಹಿಷ್ಕಾರದ ಜೊತೆಗೆ ದೇಶೀಯವಾಗಿ ಅದರಲ್ಲೂ ಸ್ಥಳೀಯವಾಗಿ ಉತ್ಪಾದನೆಯಾಗುವ ತಂಪುಪಾನೀಯ ಬಳಸುವಂತೆ ವರ್ತಕರ ಸಂಘ ಮನವಿ ಮಾಡಿದೆ.
