ಬೆಂಗಳೂರು (ಜೂ. 23): ಕಳೆದ ಎರಡು ದಿನಗಳಿಂದ ಕ್ಷೀಣವಾಗಿದ್ದ ಮುಂಗಾರು ಮಳೆ ಶನಿವಾರ ಕರಾವಳಿ ಭಾಗದಲ್ಲಿ ಮತ್ತು ಬಯಲುಸೀಮೆ ಪ್ರದೇಶದಲ್ಲಿ ಮತ್ತೆ ಚುರುಕುಗೊಂಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಭರ್ಜರಿ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಅಂಕೋಲಾದ 40ರಷ್ಟುಮನೆಗಳಿಗೆ ನೀರು ನುಗ್ಗಿದೆ. ನಗರದಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಚರಂಡಿಗಳು ಮುಚ್ಚಿದ್ದರಿಂದ ಮಳೆ ನೀರು ಹಠಾತ್ತಾಗಿ ಮನೆಗಳಿಗೆ ನುಗ್ಗಿದೆ. ರಾತ್ರಿ ಮನೆಯೊಳಗೆ ನೀರು ನುಗ್ಗುತ್ತಿದ್ದಂತೆ ಮಹಿಳೆಯರು ಹಾಗೂ ಮಕ್ಕಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.

ಸಿಡಿಲು ಬಡಿದು ಬಾಲಕನೊಬ್ಬ ಸಾವಿಗೀಡಾದ ದುರಂತದ ಸಂಗತಿ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದಲ್ಲಿ ನಡೆದಿದೆ. 28 ಕುರಿಗಳೂ ಸಹ ಸ್ಥಳದಲ್ಲೇ ಸಾವನ್ನಪ್ಪಿವೆ. ಗ್ರಾಮದ ಹೊರವಲಯದಲ್ಲಿ ಕುರಿಗಳ ಮೇಯಿಸಲು ಹೋಗಿದ್ದ ಹೊನಗೇರಾದ ಮಹೇಶ್‌ (12) ಸಂಜೆ 6 ಗಂಟೆ ಸುಮಾರಿಗೆ ಸಿಡಿಲು ಬಡಿದು ಮೃತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿಯಿತು. ಉಡುಪಿ ಜಿಲ್ಲಾದ್ಯಂತ ಸಾಧಾರಣ ಮಳೆಯಾಗಿದೆ. ಕೊಡಗಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ಉಳಿದಂತೆ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಗುಡುಗು, ಮಿಂಚಿನ ಮಳೆಯಾಗಿದೆ. ಬೆಳಗಾವಿ ಹಾಗೂ ಬಾಗಲಕೋಟೆಯ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.