ಹಾಸನ :  ದೇವರು, ರಾಹುಗಾಲ, ಗುಳಿಕಗಾಲ ಹೀಗೆ ಧಾರ್ಮಿಕ ಆಚರಣೆ, ನಂಬಿಕೆಗಳಿಂದ ಸದಾ ಗಮನ ಸೆಳೆಯುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಈ ಬಾರಿ ಥೇಟ್‌ ಜ್ಯೋತಿಷಿಗಳಂತೆ, ಸರ್ಕಾರ ಯಾವುದೇ ಕಾರಣಕ್ಕೂ ಉರುಳುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ‘ಮೈತ್ರಿ ಸರ್ಕಾರದಲ್ಲಿ ಉದ್ಭವಿಸಿರುವ ಎಲ್ಲಾ ಭಿನ್ನಾಭಿಪ್ರಾಯಗಳು ಜ.3ರಿಂದ 13ರೊಳಗೆ ನಿವಾರಣೆ ಆಗಲಿದೆ. ನಾನೇ ಲಗ್ನ ಇಟ್ಟು ಬಿಡುತ್ತೇನೆ, ಏನೂ ಆಗುವುದಿಲ್ಲ ನೋಡಿ’ ಎಂದಿದ್ದಾರೆ.

ಬುಧವಾರ ಸಂಜೆ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನೇ ಭವಿಷ್ಯ ಹೇಳುತ್ತಿದ್ದೇನೆ. ಯಾರು ಆತಂಕ ಪಡಬೇಕಾಗಿಲ್ಲ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಹೇಳಿದರು.

ರಮೇಶ್‌ ಜಾರಕಿಹೊಳಿ ಪ್ರಾಮಾಣಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಚಿವ ಸ್ಥಾನದಿಂದ ಕೈಬಿಟ್ಟಕಾರಣ ಸಣ್ಣಪುಟ್ಟಭಿನ್ನಾಭಿಪ್ರಾಯ ಉಂಟಾಗಿರಬಹುದು. ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಚುನಾವಣೆ ಇನ್ನು ದೂರವಿದೆ. ಪ್ರಜ್ವಲ್‌ ರೇವಣ್ಣಗೆ ಲೋಕಸಭೆಗೆ ಟಿಕೆಟ್‌ ನೀಡುವುದನ್ನು ಪಕ್ಷದ ವರಿಷ್ಠರು, ಶಾಸಕರು, ಮುಖಂಡರು ಹಾಗೂ ಜನರು ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕಾದರೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಇರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು ಸಚಿವ ರೇವಣ್ಣ ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ಬಗ್ಗೆ ನನಗೆ ಗೊತ್ತಿಲ್ಲ, ಹೀಗಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.