ಅನುಮತಿ ಇಲ್ಲದ ಬಿಟ್‌ಕಾಯಿನ್‌ ವ್ಯವಹಾರಕ್ಕಾಗಿ  ನಗರದ ಕೆಂಪ್‌ಫೋರ್ಟ್‌ ಮಾಲ್‌ನಲ್ಲಿ ಅಕ್ರಮ ಎಟಿಎಂ ತೆರದಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ. ನ್ನ ಗ್ರಾಹಕರಿಗೆ ವ್ಯವಹಾರಕ್ಕೆ ಎಟಿಎಂ ಬಳಕೆಗೆ ಅವಕಾಶ ನೀಡಿದ್ದ ಈತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಬೆಂಗಳೂರು(ಅ.24): ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ಕಾನೂನು ಬಾಹಿರವಾಗಿ ಬಿಟ್‌ಕಾಯಿನ್‌ ಎಟಿಎಂ ತೆರೆದಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಜಯನಗರ ನಿವಾಸಿ ಬಿ.ವಿ.ಹರೀಶ್‌(37) ಬಂಧಿತ. ಆರೋಪಿಯಿಂದ ಎರಡು ಲ್ಯಾಪ್‌ಟಾಪ್‌, ಮೊಬೈಲ್‌, 2 ಕ್ರೆಡಿಟ್‌ ಕಾರ್ಡ್‌, 5 ಡೆಬಿಟ್‌ ಕಾರ್ಡ್‌, ಪಾಸ್‌ಪೋರ್ಟ್‌, 5 ಕಂಪನಿ ಸೀಲ್‌, ಕ್ರಿಪ್ಟೋ ಕರೆನ್ಸಿಯ (ಡಿಜಿಟಲ್‌ ಕರೆನ್ಸಿ) ಡಿವೈಸ್‌ ಹಾಗೂ .1.79 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಆರೋಪಿ ರಾಜಾಜಿನಗರ ಡಾ.ರಾಜ್‌ ಕುಮಾರ್‌ ರಸ್ತೆಯಲ್ಲಿ ಯೂನೊ ಕಾಯಿನ್‌ ಟೆಕ್ನಾಲಜಿಸ್‌ ಪ್ರೈ.ಲಿ. ಕಂಪನಿ ತೆರೆದು ಡಿಜಿಟಲ್‌ ಕರೆನ್ಸಿ ಮೂಲಕ ವ್ಯವಹಾರ ನಡೆಸುತ್ತಿದ್ದ. ಭಾರತದಲ್ಲಿ ಬಿಟ್‌ಕಾಯಿನ್‌ ವ್ಯವಹಾರಕ್ಕೆ ಅನುಮತಿ ಇಲ್ಲ. ಅಲ್ಲದೆ, ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ ಎಲ್ಲಾ ಬ್ಯಾಂಕ್‌ಗಳಿಗೆ ಬಿಟ್‌ ಕಾಯಿನ್‌ ಸೇರಿ ಡಿಜಿಟಲ್‌ ಕರೆನ್ಸಿ ವ್ಯವಹಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇತ್ತ ಹರೀಶ್‌ ಅಕ್ರಮವಾಗಿ ಕೆಂಪ್‌ಫೋರ್ಟ್‌ ಮಾಲ್‌ನಲ್ಲಿ ಎಟಿಎಂ ತೆರೆದಿದ್ದ. ಇದರಲ್ಲಿ ಯೂನೊಕಾಯಿನ್‌ ಮತ್ತು ಯೂನೊಡಕ್ಸ್‌ ಗ್ರಾಹಕರಿಗೆ ಈ ಎಟಿಎಂನಲ್ಲಿ ಹಣ ಜಮೆ ಮತ್ತು ವಿತ್‌ ಡ್ರಾಗೆ ಅವಕಾಶ ಕಲ್ಪಿಸಿದ್ದ. ಎಟಿಎಂನಲ್ಲಿ ಮನವಿ ಸಲ್ಲಿಸಿದಾಗ ಮೊಬೈಲ್‌ಗೆ ಒಟಿಪಿ ನಂಬರ್‌ ಬರುತ್ತದೆ. ಅದನ್ನು ನಮೂದಿಸಿ ಭಾರತೀಯ ಕರೆನ್ಸಿಯನ್ನು ಯೂನೊಕಾಯಿನ್‌ ಅಥವಾ ಯೂನೊಡಕ್ಸ್‌ಗೆ ಜಮೆ ಮಾಡಬಹುದು. ಜಮೆ ಮಾಡಿದ ಮೊತ್ತಕ್ಕೆ ಬಿಟ್‌ಕಾಯಿನ್‌ ಪಡೆಯಬಹುದು. ಮೊಬೈಲ್‌ ಅಥವಾ ಆ್ಯಪ್‌ನಲ್ಲಿ ಕೋರಿಕೆ ಸಲ್ಲಿಸಿದ ಬಳಿಕ ಸಿಗುವ 12 ಅಂಕಿಗಳ ಪಾಸ್‌ವರ್ಡ್‌ ನಮೂದಿಸಿ ವಿತ್‌ಡ್ರಾಗೆ ಅವಕಾಶ ಕಲ್ಪಿಸಿ ಈ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಣ ಜಮೆ ಮತ್ತು ವಿತ್‌ ಡ್ರಾ ಮಾಡಲು ಸ್ವಂತ ಎಟಿಎಂ ತೆರೆದು ಆ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ. ಎಷ್ಟುವ್ಯವಹಾರ ನಡೆಸಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಲು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಸರ್ಕಾರದ ನಿಯಂತ್ರಣವಿಲ್ಲದೇ ಹಣ ವ್ಯವಹಾರ
ಆನ್‌ಲೈನ್‌ ಮೂಲಕ ಪಾವತಿ, ಹಣ ವಿನಿಮಯಕ್ಕೆ ಸಂಬಂಧಿಸಿದ ನೆಟ್‌ವರ್ಕ್ ಈ ಬಿಟ್‌ಕಾಯಿನ್‌. ಇದು ಒಂದು ಡಿಜಿಟಲ್‌ ಪಾವತಿ ವ್ಯವಸ್ಥೆ. ಇದರ ಮೂಲಕ ದೇಶದೊಳಗಿನ ಹಾಗೂ ವಿದೇಶದಲ್ಲಿನ ವ್ಯಕ್ತಿಗಳಿಗೂ ಹಣ ರವಾನಿಸಬಹುದು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಥವಾ ಇತರ ಯಾವುದೇ ಹಣಕಾಸು ಸಂಸ್ಥೆಗಳ ನಿಯಂತ್ರಣವಿಲ್ಲದೆ ನೇರವಾಗಿ ವಹಿವಾಟು ನಡೆಸಬಹುದಾಗಿದೆ.

ಕ್ರಿಪ್ಟೋ ಕರೆನ್ಸಿ: ಇದರಲ್ಲಿ ಬ್ಲಾಕ್‌ಗಳಿದ್ದು, ಯಾರೋ ಒಬ್ಬ ವ್ಯಕ್ತಿ ಬಿಟ್‌ಕಾಯಿನ್‌ ಖರೀದಿಸಿದಾಗ ಇದನ್ನು ದೃಢೀಕರಿಸಬೇಕು. ಈ ವೇಳೆ ಬ್ಲಾಕ್‌ಗಳಿಗೆ ಇರುವ ಕೀಗಳನ್ನು ಗಣಿತ ಸೂತ್ರಗಳ ಮೂಲಕ ಕಂಡುಕೊಳ್ಳಲಾಗುತ್ತದೆ. ಈ ಸೂತ್ರಗಳನ್ನು ಕಂಡುಕೊಳ್ಳಲು ಕಂಪ್ಯೂಟರ್‌ನಲ್ಲಿ ಹಲವು ಸುತ್ತಿನ ಪ್ರಯತ್ನ ನಡೆಸಬೇಕು.