ಕೆಂಗಲ್, ರಾಮಕೃಷ್ಣ ಹೆಗಡೆ, ದೇವೇಗೌಡ, ಎಚ್‌ಡಿಕೆಗೆ ಸಿಎಂ ಆಗಿ ಅವಧಿ ಪೂರ್ಣಗೊಳಿಸಿಲ್ಲ | ಈಗ ಕುಮಾರಸ್ವಾಮಿಗೆ ಮತ್ತದೇ ಸವಾಲು | ಎಚ್‌ಡಿಕೆ ನೇತೃತ್ವದ ರಾಜ್ಯ ಮೈತ್ರಿ ಸರ್ಕಾರಕ್ಕೆ ಮತ್ತೊಮ್ಮೆ ಕಂಟಕ |ಸಂಕಟದಿಂದ ಪಾರಾಗಿ ಅವಧಿ ಪೂರ್ಣಗೊಳಿಸುತ್ತಾರಾ ಎಚ್‌ಡಿಕೆ?
ಬೆಂಗಳೂರು (ಜು. 18): ರಾಮನಗರದಲ್ಲಿ ರಾಜಕೀಯವಾಗಿ ಆಶ್ರಯ ಪಡೆದಿದ್ದ ನಾಲ್ವರು ಪ್ರಭಾವಿ ರಾಜಕಾರಣಿಗಳಿಗೆ ಮುಖ್ಯಮಂತ್ರಿ ಗದ್ದುಗೆಗೇರುವ ಅದೃಷ್ಟವೇನೊ ಒಲಿದಿದೆ. ಆದರೆ ಆಡಳಿತ ಚುಕ್ಕಾಣಿಯನ್ನು ಪೂರ್ಣಾವಧಿವರೆಗೆ ನಡೆಸುವ ಯೋಗ ಮಾತ್ರ ಇನ್ನೂ ಒದಗಿ ಬರಲಿಲ್ಲ.
ರಾಜ್ಯ ರಾಜಕೀಯದಲ್ಲಿ ಅತಿರಥ ಮಹಾರಥರಂತೆ ಮೆರೆದಿದ್ದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ , ಎಚ್.ಡಿ.ದೇವೇಗೌಡ ಈ ಮೂವರೂ ವಿವಿಧ ಕಾರಣಗಳಿಗಾಗಿ ಪೂರ್ಣಾವಧಿ ಆಡಳಿತ ನಡೆಸಲು ಸಾಧ್ಯವಾಗಲೇ ಇಲ್ಲ.
ಈಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುರುವಾರದಂದು ವಿಶ್ವಾಸಮತ ಯಾಚನೆಗೆ ನಿಗದಿಯಾಗಿದೆ. ಈ ಅಗ್ನಿಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಗೆದ್ದು, ಪೂರ್ಣಾವಧಿ ಸರ್ಕಾರ ನೀಡುವ ಮೂಲಕ ಈ ಅಪವಾದ ತೊಡೆದು ಹಾಕುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.
ಎರಡು ಬಾರಿ ಕೆಂಗಲ್‌ಗೆ ಮಣೆ:
ವಿಧಾನಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಮನಗರದವರು. 1952, 1957ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1952ರ ಮೊದಲ ವಿಧಾನಸಭೆಯಲ್ಲಿ ಮೈಸೂರು ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಕೆಂಗಲ್ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು, 4 ವರ್ಷ 5 ತಿಂಗಳು ಆಡಳಿತ ನಡೆಸಿದ್ದರು. ಆಂತರಿಕ ಭಿನ್ನಮತದಿಂದಾಗಿ ಕಾಂಗ್ರೆಸ್ಸಿಗರೇ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ವಿಶ್ವಾಸಮತ ಸಾಬೀತು ಪಡಿಸಲಾಗದೆ ಕೆಂಗಲ್ ಅಂದು ಅಧಿಕಾರ ಕಳೆದುಕೊಳ್ಳುತ್ತಾರೆ. ಬಾಕಿ ಉಳಿದಿದ್ದ ನಾಲ್ಕು ತಿಂಗಳ ಅವಧಿಗೆ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿ ಆಗಿದ್ದರು.
ಹೆಗಡೆಗೆ ರಾಜಕಿಯ ಆಶ್ರಯ:
1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಉಭಯ ಸದನಗಳಲ್ಲಿ ಯಾವುದರಲ್ಲೂ ಶಾಸಕ ಸ್ಥಾನವಿರದ ಅವರು ಆರು ತಿಂಗಳೊಳಗೆ ಶಾಸಕರಾಗಬೇಕಾಗಿತ್ತು. ಅವರಿಗಾಗಿ ಕನಕಪುರದಿಂದ ಚುನಾಯಿತರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಸ್ಥಾನ ತೆರವು ಮಾಡಿಕೊಟ್ಟರು.
ಚುನಾವಣೆಯಲ್ಲಿ ಬನ್ನಿಮಕೋಡ್ಲು ಲಿಂಗೇಗೌಡ ಎದುರು ರಾಮಕೃಷ್ಣ ಹೆಗಡೆ ಗೆಲುವು ಸಾಧಿಸಿ, ಸದನ ಸದಸ್ಯರಾದರು. 12 ತಿಂಗಳು ಮಾತ್ರ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಜನತಾ ಪಕ್ಷದ ಶಾಸಕರೊಂದಿಗಿನ ಸಂಭಾಷಣೆಯುಳ್ಳ ವೀರಪ್ಪ ಮೊಯ್ಲಿ ಅವರ ಟೇಪ್ ಹಗರಣದಿಂದಾಗಿ ಹೆಗಡೆಯವರು ಸರ್ಕಾರ ವಿಸರ್ಜಿಸಿ ಜನಾದೇಶಕ್ಕೆ ತೆರಳಿದ್ದರು.
ದೇವೇಗೌಡರಿಗೆ ಮರುಹುಟ್ಟು:
1994ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳ ಪರ ಅಲೆ ಇತ್ತು. ಸ್ವಕ್ಷೇತ್ರ ಹೊಳೆನರಸೀಪುರ ಮತ್ತು ರಾಮನಗರ ಪೈಕಿ ರಾಮನಗರದಿಂದ ಗೆದ್ದರೆ ಮುಖ್ಯಮಂತ್ರಿ ಕುರ್ಚಿ ಏರುವುದು ಸಲೀಸು ಎನ್ನುವ ಜ್ಯೋತಿಷ್ಯವಾಣಿ ಪ್ರಕಾರ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದಿದ್ದರು. ಮಾತ್ರವಲ್ಲ ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡಳಿತ ನಡೆಸಿದರು. ಆ ವೇಳೆ ಅವರಿಗೆ ಪ್ರಧಾನ ಮಂತ್ರಿ ಹುದ್ದೆ ಒಲಿದು ಬಂದಿದ್ದರಿಂದ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದರು.
ಎಚ್‌ಡಿಕೆಗೆ ರಾಜಕೀಯ ಜನ್ಮಭೂಮಿ:
1996ರಲ್ಲಿ ಲೋಕಸಭಾ ಚುನಾವಣೆ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಅವಿಭಜಿತ ಜನತಾದಳ ಅಭ್ಯರ್ಥಿಯಾಗಿ ಭಾರೀ ಅಂತರದ ಗೆಲುವು ಸಾಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಮುಂದೆ ರಾಮನಗರವನ್ನೇ ರಾಜಕೀಯ ಜನ್ಮಭೂಮಿಯನ್ನಾಗಿಸಿಕೊಂಡರು.
2004 ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಪ್ರವೇಶಿಸಿದ ಅವರು ಬಿಜೆಪಿ ಸಖ್ಯದೊಂದಿಗೆ ಮುಖ್ಯಮಂತ್ರಿಯೂ ಆದರು. ಆದರೆ ಆ ಸರ್ಕಾರ 20 ತಿಂಗಳಲ್ಲೇ ಬಿದ್ದು ಹೋಯಿತು. ಇದೀಗ ಕಾಂಗ್ರೆಸ್ ಜೊತೆಗಿನ ದೋಸ್ತಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 14 ತಿಂಗಳಾಗಿದ್ದು ಮತ್ತೊಮ್ಮೆ ಕಂಟಕ ಎದುರಾಗಿದೆ.
ಮುಖ್ಯಮಂತ್ರಿ-ಆರಂಭ-ಮುಕ್ತಾಯ-ರಾಜಕೀಯ ಪಕ್ಷ-ವಿಧಾನಸಭೆ
ಕೆಂಗಲ್ ಹನುಮಂತಯ್ಯ-1952 ಮಾ.30-1956 ಆ.19-ಕಾಂಗ್ರೆಸ್-1ನೇ ವಿಧಾನಸಭೆ
ರಾಮಕೃಷ್ಣ ಹೆಗಡೆ-1983 ಜ.10-1984 ಡಿ.29-ಜನತಾ ಪಕ್ಷ 7ನೇ ವಿಧಾನಸಭೆ
ಎಚ್.ಡಿ.ದೇವೇಗೌಡ-1994 ಡಿ.11-1996 ಮೇ 31-ಜನತಾ ದಳ-10ನೇ ವಿಧಾನಸಭೆ
ಎಚ್.ಡಿ.ಕುಮಾರಸ್ವಾಮಿ-2006 ಫೆ.3-2007 ಅ.8-ಜನತಾ ದಳ(ಜಾ)-12ನೇ ವಿಧಾನಸಭೆ
ಎಚ್.ಡಿ.ಕುಮಾರಸ್ವಾಮಿ-2018 ಮೇ 23ರಿಂದ.......- ಜನತಾ ದಳ(ಜಾ)-15ನೇ ವಿಧಾನಸಭೆ
- ಎಂ ಅಫ್ರೋಜ್ ಖಾನ್