ಬೆಂಗಳೂರು[ಆ.05]: ಉತ್ತರ ಕರ್ನಾಟಕದ ಪ್ರವಾಹಪಿಡೀತ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಭೇಟಿ ನೀಡಲಿದ್ದು, ಪ್ರವಾಹದ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಿದ್ದಾರೆ

ಸೋಮವಾರ ಬೆಳಗ್ಗೆ 9 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬಳ್ಳಾರಿ ಜಿಲ್ಲೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡ ಲಿದ್ದಾರೆ. ಯಾದಗಿರಿ, ರಾಯಚೂರು, ಬಾಗಲ ಕೋಟೆ, ವಿಜಯಪುರ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆಯನ್ನು ಮೊದಲು ನಡೆಸಲಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಅಲ್ಲದೇ, ಅಥಣಿಯಿಂದ ರಸ್ತೆಯ ಮೂಲಕ ಪ್ರವಾಹ ಬಾಧಿತವಾಗಿರುವ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಸತ್ತಿ ಮತ್ತು ನಂದೇ ಶ್ವರಕ್ಕೆ ತೆರಳಿ ಪ್ರವಾಹ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹದಿಂದ ನಲುಗಿರುವ ಅಥಣಿ, ಚಿಕ್ಕೋಡಿ ಮತ್ತು ರಾಯಭಾಗ ತಾಲೂಕಿನ ವಿವಿಧ ಪ್ರದೇಶದಲ್ಲಿ ಜನ-ಜಾನುವಾರುಗಳು, ರೈತರ ಸಮಸ್ಯೆಗಳನ್ನು ಅವಲೋಕಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರತಿಕೂಲ ವಾತಾವರಣ ಇದೆ ಎಂಬ ಕಾರಣಕ್ಕೆ ಸಿಎಂ ಬೆಳಗಾವಿ ಸಮೀಕ್ಷೆ ನಿಗದಿಯಾಗಿರಲಿಲ್ಲ. ಆದರೆ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮತ್ತು ಮಾಜಿ ಸಚಿವ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಗಳನ್ನು ಭಾನುವಾರ ರಾತ್ರಿ ಭೇಟಿ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿಗೂ ತೆರಳಲು ಯಡಿಯೂರಪ್ಪ ಅವರು ತೀರ್ಮಾನಿಸಿದ್ದಾರೆ.