Asianet Suvarna News Asianet Suvarna News

ಸಾಲ ಮನ್ನಾ ಲೆಕ್ಕ ಪಡೆದ ಸಿಎಂ ಬಿಎಸ್‌ವೈ

ಸಾಲ ಮನ್ನಾ ಲೆಕ್ಕ ಪಡೆದ ಸಿಎಂ ಬಿಎಸ್‌ವೈ | ಋುಣ ಮುಕ್ತ ಕಾಯ್ದೆ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ | ಆರ್ಥಿಕ, ವಸತಿ ಮತ್ತಿತರ ಇಲಾಖೆ ಅಧಿಕಾರಿಗಳ ಜತೆ 3 ತಾಸು ಸಭೆ

CM Yediyurappa held a meeting at Vidhana Soudha with the officials regarding the crop analysis
Author
Bengaluru, First Published Aug 2, 2019, 11:08 AM IST
  • Facebook
  • Twitter
  • Whatsapp

ಬೆಂಗಳೂರು (ಆ. 02):  ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಇಲಾಖೆಗಳ ಅಭಿವೃದ್ಧಿ ಕುರಿತು ಸಭೆಗಳನ್ನು ನಡೆಸಿ ಮಾಹಿತಿಗಳನ್ನು ಕ್ರೋಢೀಕರಿಸುವಲ್ಲಿ ನಿರತವಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರ ಸಾಲ ಮನ್ನಾ, ಋುಣಮುಕ್ತ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಇತರೆ ಮಹತ್ವದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರ್ಥಿಕ ಇಲಾಖೆ, ವಸತಿ ಇಲಾಖೆ, ಬೆಳೆ ಸಮೀಕ್ಷೆ ಸಂಬಂಧ ಸಂಬಂಧಪಟ್ಟಇಲಾಖೆ, ಋುಣಮುಕ್ತ ಕಾಯ್ದೆ ಕುರಿತು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮೂರು ಗಂಟೆಗಳ ಕಾಲ ಸಭೆ ನಡೆಸಿದರು.

ಆರ್ಥಿಕ ಇಲಾಖೆಯೊಂದಿಗೆ ಮೊದಲು ಸಭೆ ನಡೆಸಿದ ಯಡಿಯೂರಪ್ಪ, ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದ ಸಾಲ ಮನ್ನಾ ಯೋಜನೆಯಲ್ಲಿ ಎಷ್ಟುಹಣ ಬಿಡುಗಡೆ ಮಾಡಲಾಗಿದೆ ಎಂಬುದು, ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿರುವ ಬಗ್ಗೆ ಮತ್ತು ಬಾಕಿ ಇರುವ ಸಾಲದ ಮೊತ್ತದ ಬಗ್ಗೆ ಮಾಹಿತಿ ಪಡೆದುಕೊಂಡರು.

ರೈತರ ಸಾಲ ಮನ್ನಾ ಯೋಜನೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದ್ದು, ಇದನ್ನು ಸರಿಪಡಿಸುವಂತೆ ಸೂಚಿಸಿದರು. ಅಲ್ಲದೇ, ಯಾವ ಕಾರ್ಯಕ್ರಮಗಳಿಗೆ ಎಷ್ಟೆಷ್ಟುಅನುದಾನ ಮೀಸಲಿಡಲಾಗಿದೆ ಎಂಬುದರ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.

ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯುವ ಮೊದಲು ಋುಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದರ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಅಗತ್ಯ ನಿಯಮಾವಳಿ ರೂಪಿಸುವ ಕುರಿತು ಚರ್ಚಿಸಿದರು. ಅಲ್ಲದೆ, ಖಾಸಗಿ ಲೇವಾದೇವಿದಾರರು ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೈತರಿಗೆ ತೊಂದರೆ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯದ ಹಣಕಾಸು ಕೊರತೆ ಶೇ.2.48ರಷ್ಟುಇದ್ದು, ಹಣಕಾಸು ಹೊಣೆಗಾರಿಕೆ ಕಾಯ್ದೆಯ ಮಿತಿಯಲ್ಲಿದೆ. ತೆರಿಗೆ ಸಂಗ್ರಹ ಈವರೆಗೆ ನಿಗದಿತ ವಾರ್ಷಿಕ ಗುರಿಯ ಶೇ.23.33ರಷ್ಟಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ವಾರ್ಷಿಕ ಗುರಿಯ ಶೇ.23.28 ರಷ್ಟಾಗಿದೆ.

ಅಬಕಾರಿ ಇಲಾಖೆಯಲ್ಲಿ ಶೇ.27.49, ವಾಹನ ನೋಂದಣಿ ಶೇ.20.78, ನೋಂದಣಿ- ಮುದ್ರಾಂಕ ಇಲಾಖೆಯಲ್ಲಿ ಶೇ.22.72ರಷ್ಟುತೆರಿಗೆ ಸಂಗ್ರಹವಾಗಿದೆ ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಸಭೆಯಲ್ಲಿ ಮಾಹಿತಿ ನೀಡಿದರು.

2019-20 ನೇ ಸಾಲಿಗೆ ಇಂಧನ, ಆಹಾರ ಸಬ್ಸಿಡಿ, ಲೋಕೋಪಯೋಗಿ, ವಸತಿ ಇಲಾಖೆ ಮೊದಲಾದ ಇಲಾಖೆಗಳಿಂದ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಹೇಳಿದರು.

Follow Us:
Download App:
  • android
  • ios