ದೆಹಲಿಗೆ ತೆರಳಲಿರುವ ಅವರು, ಇದೇ ವೇಳೆ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯಾವಕಾಶವನ್ನು ಕೋರಲಿದ್ದಾರೆ. ದೊರೆತರೆ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ತಮ್ಮ ಅಭಿಪ್ರಾಯವನ್ನು ನೇರವಾಗಿ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪೈಪೋಟಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ತಮ್ಮ ಇಂಗಿತವನ್ನು ನೇರಾನೇರ ಮುಟ್ಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ (ಏ.23) ಮತ್ತೆ ದೆಹಲಿಗೆ ತೆರಳುವ ಸಂಭವವಿದೆ.
ಭಾನುವಾರ ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಜ್ಞಾನ ಆಯೋಗದ ಸಭೆಗೆ ಸಿದ್ದರಾಮಯ್ಯ ಅವರಿಗೆ ಆಹ್ವಾನವಿದೆ. ಈ ಸಭೆಗಾಗಿ ದೆಹಲಿಗೆ ತೆರಳಲಿರುವ ಅವರು, ಇದೇ ವೇಳೆ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯಾವಕಾಶವನ್ನು ಕೋರಲಿದ್ದಾರೆ. ದೊರೆತರೆ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ತಮ್ಮ ಅಭಿಪ್ರಾಯವನ್ನು ನೇರವಾಗಿ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಎಂಎಲ್ಸಿಗೆ ಇಬ್ಬರು ಮಾತ್ರ ನಾಮಕರಣ?: ರಾಜ್ಯ ನಾಯಕತ್ವ ವಿಧಾನ ಪರಿಷತ್‌ ಸದಸ್ಯರ ನಾಮಕರಣದ ಕುರಿತು ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿರುವ ಬೆನ್ನಲ್ಲೇ ಈ ವಾರದೊಳಗೆ ನಾಮಕರಣವಾಗಲಿದೆ ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಖಾಲಿಯಿರುವ ಮೂರು ಸದಸ್ಯ ಸ್ಥಾನಗಳ ಪೈಕಿ ಈಗ ಎರಡಕ್ಕೆ ಮಾತ್ರ ನಾಮಕರಣ ನಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ.

ತೀವ್ರ ಪೈಪೋಟಿಯಿಂದಾಗಿ ಒಂದು ಸ್ಥಾನವನ್ನು ಉಳಿಸಿಕೊಂಡು ಉಳಿದ ಎರಡನ್ನು ನೇಮಕ ಮಾಡಲು ಹೈಕಮಾಂಡ್‌ ಸೂಚಿಸಿದೆ ಎನ್ನಲಾಗಿದ್ದು, ಇದಕ್ಕೆ ಹೈಕಮಾಂಡ್‌ನಿಂದ ಅಧಿಕೃತ ಒಪ್ಪಿಗೆ ಬಂದ ಬೆನ್ನಲ್ಲೇ ನಾಮಕರಣ ಶಿಫಾರಸು ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್‌ಗೆ ರಾಜ್ಯ ನಾಯಕತ್ವ ನೀಡಿರುವ ಮೂರು ಹೆಸರುಗಳ ಪೈಕಿ ಮೋಹನ್‌ ಕೊಂಡಜ್ಜಿ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ ಎಂದು ಸಿಎಂ ಆಪ್ತ ಮೂಲಗಳು ಹೇಳಿವೆ. ಉಳಿದ ಎರಡು ಹೆಸರುಗಳಾದ ಕೆ.ಪಿ. ನಂಜುಂಡಿ ಹಾಗೂ ಸಿ.ಎಂ. ಲಿಂಗಪ್ಪ ಅವರ ಪೈಕಿ ಒಬ್ಬರಿಗೆ ಸ್ಥಾನ ನೀಡಿ ಒಂದು ಸ್ಥಾನವನ್ನು ತುಂಬಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಆದರೆ, ಈ ಇಬ್ಬರ ಪೈಕಿ ನಾಮಕರಣಗೊಳ್ಳುವ ಹೆಸರು ಯಾವುದು ಎಂಬುದು ಸ್ಪಷ್ಟವಿಲ್ಲ. ಒಂದು ಮೂಲ ನಂಜುಂಡಿ ಅವರ ಹೆಸರು ಅಖೈರುಗೊಂಡಿದೆ ಎಂದರೆ, ಮತ್ತೊಂದು ಮೂಲ ಲಿಂಗಪ್ಪ ಅವರ ನೇಮಕದ ಸಾಧ್ಯತೆಯಿದೆ ಎನ್ನುತ್ತಿದೆ.