ಸಂಸದರಾದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ನೋಡಿ ವಿಜಯಶಂಕರ್‌ಗೆ ಬೇಸರವಾಗಿದೆ.

ಬೆಂಗಳೂರು(ಫೆ.06): ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಸಮಾಜಕ್ಕೆ ಬೆಂಕಿ ಹಚ್ಚಲು ಯತ್ನಿಸುವ ಬಿಜೆಪಿ ಸಂಸದರಾದ ಪ್ರತಾಪ್‌ಸಿಂಹ, ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಹಾಗೂ ನಳಿನ್‌ಕುಮಾರ್ ಕಟೀಲ್ ಅವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸೋಮವಾರ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಬಿಜೆಪಿಯ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಹಾಗೂ ಜೆಡಿಎಸ್‌ನ ಶಾಸಕರಾಗಿದ್ದ ದಿವಂಗತ ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಸಂಸದರಾದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ನೋಡಿ ವಿಜಯಶಂಕರ್‌ಗೆ ಬೇಸರವಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಹಾಗೂ ಸಂವಿಧಾನ ಬದಲಿಸುತ್ತೇವೆ ಎಂಬ ಅವರ ಹೇಳಿಕೆಗಳು, ಕೋಮುಗಲಭೆ ಸೃಷ್ಟಿಸಿ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತು, ಸುಳ್ಳು ಹೇಳಿ ಪ್ರಚಾರ ಮಾಡಿ ಎಂಬ ಕೆ.ಎಸ್. ಈಶ್ವರಪ್ಪ ಮಾತುಗಳು ಬಿಜೆಪಿಯ ಸಂಸ್ಕೃತಿ ತೋರಿಸುತ್ತವೆ. ಇವರೆಲ್ಲಾ ಸಾರ್ವಜನಿಕ ಜೀವನದಲ್ಲಿರುವ ಅರ್ಹರಲ್ಲ ಎಂದು ಹೇಳಿದರು.

ಈಶ್ವರಪ್ಪಗೆ ನಾಲಿಗೆ ಹಾಗೂ ಮೆದುಳಿಗೆ ಸಂಪರ್ಕ ತಪ್ಪಿಹೋಗಿದೆ. ಬಿಜೆಪಿ ನಾಯಕರೆಲ್ಲಾ ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದರು.