Asianet Suvarna News Asianet Suvarna News

ಬಿಎಸ್‌ವೈ ಸೀರೆ, ಸೈಕಲ್ ಕೊಟ್ಟು ಜೈಲಿಗೆ ಹೋಗಿದ್ದೇ ಅಭಿವೃದ್ಧಿ : ಜೆಡಿಎಸ್ ಅವಕಾಶವಾದಿ ರಾಜಕಾರಣ

ಮನುಷ್ಯನಿಗೆ ಒಂದು ನಾಲಿಗೆ ಇರಬೇಕು. ಆದರೆ ಬಿಜೆಪಿಯವರಿಗೆ ಎರಡು ನಾಲಿಗೆ ಇದೆ. ಉದಾಹರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಜೆಪಿ ರಚಿಸಿದ್ದಾಗ ಟಿಪ್ಪು ಒಬ್ಬ ವೀರಯೋಧ, ದೇಶಭಕ್ತ ಎಂದು ಹೊಗಳಿ, ಟಿಪ್ಪುವಿನಂತೆ ವೇಷ ತೊಟ್ಟಿದ್ದರು. ಮತ್ತೆ ಬಿಜೆಪಿ ಸೇರಿದ ಮೇಲೆ ಆತನನ್ನು ಮತಾಂಧ ಎಂದು ಕರೆಯುತ್ತಾರೆ. ಅಂತೆಯೇ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡಿ ಎಂದು ಉಗ್ರಪ್ಪ ಕೇಳಿದರೆ ನನ್ನ ಬಳಿ ಹಣ ಪ್ರಿಂಟ್ ಮಾಡುವ ಮಷಿನ್ ಇದೆಯಾ ಎಂದು ಪ್ರಶ್ನಿಸಿದ್ದವರು ಈಗ ನಮ್ಮನ್ನು ಸಾಲ ಮನ್ನಾ ಮಾಡಿ ಎಂದು ಹೇಳುತ್ತಿದ್ದಾರೆ

CM Slams BJP and JDS

ಸರಗೂರು/ಎಚ್.ಡಿ. ಕೋಟೆ(ಜ.11): ಎರಡು ನಾಲಿಗೆಯುಳ್ಳ ಯಡಿಯೂರಪ್ಪ ತನ್ನ ಸರ್ಕಾರದ ಸಾಧನೆಯ ಅವಧಿ ಏನು ಎಂದರೆ ಸೀರೆ ಕೊಟ್ಟೆ, ಸೈಕಲ್ ಕೊಟ್ಟೆ, ಜೈಲಿಗೆ ಹೋದೆ ಎಂದು ಹೇಳಬಹುದೆ ಹೊರತು ಇನ್ನೇನು ಹೇಳಲು ಸಾಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ಸರಗೂರಿನಲ್ಲಿ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಮಾಡಿ ಚುನಾವಣಾ ಪ್ರಚಾರ ಮಾಡುತ್ತಿರುವುದಾಗಿ ಬಿಜೆಪಿ ಮತ್ತು ಜೆಡಿಎಸ್‌ನವರು ದೂರುತ್ತಿದ್ದಾರೆ. ಇನ್ನೂ ನೀತಿ ಸಂಹಿತೆ ಜಾರಿಯಾಗಿಲ್ಲ. ಸರ್ಕಾರಿ ಕಾರ್ಯಕ್ರಮವನ್ನು ಸರ್ಕಾರದ ಹಣದಲ್ಲಿ ಮಾಡುವುದಲ್ಲದೆ, ಸ್ವಂತ ಖರ್ಚಿನಿಂದ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ಅಲ್ಲದೆ ಪ್ರಧಾನಿ ಮೋದಿ ವಿದೇಶ ಪ್ರವಾಸ ಮತ್ತು ರಾಜ್ಯ ಪ್ರವಾಸವನ್ನು ಸ್ವಂತ ದುಡ್ಡಿನಲ್ಲಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ತಮ್ಮ ಭಾಷಣದುದ್ದಕ್ಕೂ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಕಡೆಗೆ ನಮಗೆ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ಎರಡು ನಾಲಿಗೆ:

ಮನುಷ್ಯನಿಗೆ ಒಂದು ನಾಲಿಗೆ ಇರಬೇಕು. ಆದರೆ ಬಿಜೆಪಿಯವರಿಗೆ ಎರಡು ನಾಲಿಗೆ ಇದೆ. ಉದಾಹರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಜೆಪಿ ರಚಿಸಿದ್ದಾಗ ಟಿಪ್ಪು ಒಬ್ಬ ವೀರಯೋಧ, ದೇಶಭಕ್ತ ಎಂದು ಹೊಗಳಿ, ಟಿಪ್ಪುವಿನಂತೆ ವೇಷ ತೊಟ್ಟಿದ್ದರು. ಮತ್ತೆ ಬಿಜೆಪಿ ಸೇರಿದ ಮೇಲೆ ಆತನನ್ನು ಮತಾಂಧ ಎಂದು ಕರೆಯುತ್ತಾರೆ. ಅಂತೆಯೇ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡಿ ಎಂದು ಉಗ್ರಪ್ಪ ಕೇಳಿದರೆ ನನ್ನ ಬಳಿ ಹಣ ಪ್ರಿಂಟ್ ಮಾಡುವ ಮಷಿನ್ ಇದೆಯಾ ಎಂದು ಪ್ರಶ್ನಿಸಿದ್ದವರು ಈಗ ನಮ್ಮನ್ನು ಸಾಲ ಮನ್ನಾ ಮಾಡಿ ಎಂದು ಹೇಳುತ್ತಿದ್ದಾರೆ. ನಾಯಕನಾದವನಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಎಚ್ಚರ ಇರಬೇಕು. ಅಧಿಕಾರ ಇದ್ದಾಗ ಒಂದು, ಇಲ್ಲದಿದ್ದಾಗ ಒಂದು ಮಾತನಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು.

ಜೈಲಿಗೆ ಹೋದವರು:

ನಮ್ಮ ಸರ್ಕಾರದ ಸಾಧನೆ ಮತ್ತು ನಿಮ್ಮ ಸಾಧನೆಯನ್ನು ಬನ್ನಿ ಒಂದೇ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸೋಣ ಎಂದು ಕರೆದರೆ ಬರುತ್ತಿಲ್ಲ. ಕೇಂದ್ರ ಸರ್ಕಾರ ಮೂರುವರೆ ವರ್ಷದಲ್ಲಿ ಏನು ಮಾಡಿದೆ ಹೇಳಿ ಎಂದರೆ ಉತ್ತರ ಇಲ್ಲ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಪಕ್ಕದಲ್ಲಿ ಜೈಲಿಗೆ ಹೋಗಿದ್ದ ಯಡಿಯೂರಪ್ಪ, ಕೃಷ್ಣಯ್ಯಶೆಟ್ಟಿ, ಕಟ್ಟ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕೂರಿಸಿಕೊಂಡು ಅಮಿತ್ ಶಾ ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರ ಎಂದು ಟೀಕಿಸುತ್ತಿದ್ದಾರೆ. ಇಷ್ಟಕ್ಕೂ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದಿದ್ದಾಗಿ ಟೀಕಿಸಿದರು.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರು ಮಂದಿ ಮುಖ್ಯಮಂತ್ರಿಗಳಾಗಿದ್ದರು. ಯಡಿಯೂರಪ್ಪ ತಾನು ಅಧಿಕಾರದಲ್ಲಿ ಇರುವಷ್ಟು ದಿನ ಹೋದಲೆಲ್ಲ ಸೀರೆ ಕೊಟ್ಟೆ, ಸೈಕಲ್ ಕೊಟ್ಟೆ ಎಂದು ಹೇಳುತ್ತಿದ್ದರು. ಅವರಡೆ ಹೇಳಲು ಇದ್ದದ್ದು. ಅದನ್ನು ಬಿಟ್ಟರೆ ಜೈಲಿಗೆ ಹೋದೆ ಎಂತಲೇ ಹೇಳಬೇಕು. ಹೀಗೆ ನಾನು ಸತ್ಯ ಹೇಳಿದರೆ ಚುನಾವಣಾ ಪ್ರಚಾರ ಎಂದು ಟೀಕಿಸುತ್ತಾರೆ. ನಾನು ಸತ್ಯ ಹೇಳದೆ ಸುಮ್ಮನೆ ಇರಬೇಕಾ ಎಂದು ವಾಗ್ದಾಳಿ ನಡೆಸಿದರು.

ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದಂತೆ, ಹಟ್ಟಿಗಳಲ್ಲಿ ವಾಸಿಸುವ ಸಮುದಾಯಗಳಾದ ಆದಿವಾಸಿಗಳು ಮತ್ತು ತಾಂಡದ ನಿವಾಸಿಗಳಿಗೆ ಅನುಕೂಲ ಕಲ್ಪಿಸಿದ್ದೇನೆ. ನಾಲ್ಕು ವರ್ಷ ೮ ತಿಂಗಳು ಆಡಳಿತ ನಡೆಸಿದ್ದೇನೆ. ಮೇಗೆ ಚುನಾವಣೆ ನಡೆಯುವುದರಿಂದ ಐದು ವರ್ಷ ಪೂರ್ಣಗೊಳಿಸುತ್ತೇನೆ.

ರಾಜ್ಯದ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಎಂಬ ಕೇಂದ್ರ ಸಚಿವರು ಬಹಳ ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ನಾವು ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾವನ್ನು ರೈತರಿಗೆ ಲಾಲಿಪಪ್ ನೀಡಿರುವುದಾಗಿ ಟೀಕಿಸುತ್ತಾರೆ. ಇವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ದಲಿತರ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ. ಇವರದ್ದೇನಿದ್ದರೂ ಬೆಂಕಿ ಹಚ್ಚುವ ಕೆಲಸ ಮಾತ್ರ ಎಂದು ಟೀಕಿಸಿದರು.

ಜೆಡಿಎಸ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ:

ನಾನು ಜೆಡಿಎಸ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್ ಇದ್ದಾರೆ. ಅವರೇನು (ಜೆಡಿಎಸ್) ಅಧಿಕಾರಕ್ಕೆ ಬರುವುದಿಲ್ಲ. ಯಾರೂ ಹೆಚ್ಚು ಸ್ಥಾನ ಗಳಿಸದಿದ್ದರೆ ಬೆಂಕಿ ಕಾಯಿಸಿಕೊಳ್ಳೋಣ ಅಂತಿದ್ದಾರೆ. ಅವರು ಅವಕಾಶವಾದಿಗಳು. ಆದರೆ ಬಿಜೆಪಿಯವರು ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

ಸಾವಿರಾರು ಕೋಟಿ ಕಾರ್ಯಕ್ರಮ:

ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗ ₹೧೧೩ ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಕ್ಷೇತ್ರಕ್ಕೆ ಈವರೆಗೆ ₹ ೧೪೦೦ ಕೋಟಿ ಅನುದಾನ ನೀಡಲಾಗಿದೆ. ನಾನು ಈ ಹಿಂದೆ ಎಚ್.ಡಿ. ಕೋಟೆ ದತ್ತು ಪಡೆಯುವುದಾಗಿ ಹೇಳಿದ್ದ ಕಾರಣಕ್ಕೆ ಇಷ್ಟು ಅನುದಾನ ನೀಡಿದ್ದೇನೆ. ನಮ್ಮ ಪಕ್ಷದ ಶಾಸಕರು ಇಲ್ಲದಿದ್ದರೂ ಈ ಕ್ಷೇತ್ರ ಹಿಂದುಳಿದಿದೆ ಎಂಬ ಕಾರಣಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಯಾವುದೇ ಸರ್ಕಾರದಲ್ಲಿ ಒಂದು ಕ್ಷೇತ್ರಕ್ಕೆ ಇಷ್ಟೊಂದುಅನುದಾನ ನೀಡಿಲ್ಲ. ನೀರಾವರಿಗೆ ೫೦ ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು. ಅದರಂತೆ ಈಗ ೪೫ ಸಾವಿರ ಕೋಟಿ ನೀಡಲಾಗಿದೆ. ಉಳಿಕೆ ೫ ಸಾವಿರ ಕೋಟಿಯನ್ನು ಮಾರ್ಚ ಅಂತ್ಯಕ್ಕೆ ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಣ್ಣ ಕೈಗಾರಿಕ ಸಚಿವೆ ಡಾ. ಗೀತಾ ಮಹದೇವಪ್ರಸಾದ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಸಂಸದ ಆರ್. ಧ್ರುವನಾರಾಯಣ್, ಶಾಸಕ ಕೆ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್, ಭೋವಿ ನಿಗಮದ ಅಧ್ಯಕ್ಷ ಜಿ.ವಿ. ಸೀತಾರಾಮು, ಎಚ್.ಡಿ. ಕೋಟೆ ಪುರಸಭೆ ಅಧ್ಯಕ್ಷೆ ಎಂ.ಎನ್. ಮಂಜುಳಾ ಗೋವಿಂದಾಚಾರ್, ತಾಪಂ ಅಧ್ಯಕ್ಷೆ ಮಂಜುಳಾ ರೇವಣ್ಣ, ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಸರಗೂರು ಪಪಂ ಅಧ್ಯಕ್ಷೆ ಎಲ್. ಪದ್ಮಾವತಿ ಗೋಪಾಲಕೃಷ್ಣಶೆಟ್ಟಿ, ಜಿಪಂ ಸದಸ್ಯರಾದ ಎಸ್. ಶ್ರೀಕೃಷ್ಣ, ವೆಂಕಟಸ್ವಾಮಿ, ಎಂ.ಪಿ. ನಾಗರಾಜು, ಮಹದೇವಮ್ಮ ಚಿಕ್ಕಣ್ಣ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧಕ್ಷೆ ನಂದಿನಿ ಚಂದ್ರಶೇಖರ್ ಇದ್ದರು.

Follow Us:
Download App:
  • android
  • ios