ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಯಾದಗಿರಿ (ಡಿ.18): ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಗುಜರಾತ್ ಜನ ಈಗಲೂ ನೋಟ್​​​ ಬ್ಯಾನ್ ಮತ್ತು ಜಿಎಸ್​​​ಟಿ‌ ಒಪ್ಪಿಲ್ಲ. ಅಲ್ಲಿ ಮೋದಿ ಪ್ರಭಾವವಿದ್ದರೇ, ಕಾಂಗ್ರೆಸ್ ಸಂಪೂರ್ಣವಾಗಿ ಸೋಲಬೇಕಿತ್ತಲ್ಲವೇ? ಮತಗಳ ಪರ್ಸೆಂಟೇಜ್ ನೋಡಿದಾಗ ಪಕ್ಷಗಳು ಪಡೆದ ಮತಗಳ ಬಗ್ಗೆ ತಿಳಿಯುತ್ತದೆ. ನಾವು ಜನರ ತೀರ್ಪನ್ನು ಸ್ವಾಗತಿಸುತ್ತೇವೆ. ಗುಜರಾತ್'ನಲ್ಲಿ ಕೇಂದ್ರದ ಅಧಿಕಾರದ ಪ್ರಭಾವ ಹಾಗೂ ಹಣ ಬಳಕೆಯಿಂದ ಬಿಜೆಪಿ ಗೆಲುವಿಗೆ ಕಾರಣವಾಗಿರಬಹುದು.‌ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸಬೇಕು ಎಂದಿದ್ದಾರೆ.

ಗುಜರಾತ್'ನಲ್ಲಿ ಗೆದ್ದು ಸೋತಿದ್ದೇವೆ, ಪಕ್ಷದ ಫಲಿತಾಂಶ ಸುಧಾರಿಸಿದೆ. ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರಲ್ಲ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಗ್ಗೆ ಈಗಲೂ ಶಂಕೆಯಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಫಲಿತಾಂಶ ಸುಧಾರಿಸಿದೆ. ಸಿಬಿಐ ದುರ್ಬಳಕೆ, ಐಟಿ ದಾಳಿ ಮೂಲಕ ಭಯ ಹುಟ್ಟಿಸುವ ಯತ್ನ ನಡೆಯಿತು. ಗುಜರಾತ್ ಕಾಂಗ್ರೆಸ್'ನಲ್ಲಿ ಪ್ರಾದೇಶಿಕ ಮಟ್ಟದ ನಾಯಕರ ಅವಶ್ಯಕತೆಯಿದೆ. ಪ್ರಧಾನಿ ಮೋದಿಯವರಿಗೂ ಅಭಿನಂದನೆ, ರಾಹುಲ್ ಗಾಂಧಿ ಅವರಿಗೂ ಅಭಿನಂದನೆಗಳು ಎಂದಿದ್ದಾರೆ.

ರಾಜ್ಯದಲ್ಲಿ 150+ ಗೆಲ್ಲುತ್ತೇವೆ ಎಂದು ಬಿಜೆಪಿ ಭ್ರಮೆಯಲ್ಲಿದೆ. ಗುಜರಾತ್'ನಲ್ಲಿ ಕಾಂಗ್ರೆಸ್ ಪಕ್ಷದ ನೆಟ್ ವರ್ಕ್ ಕೊರತೆ ಎದ್ದು ಕಾಣುತ್ತಿದೆ. ಶಂಕರ್ ಸಿಂಗ್ ವಘೇಲಾ ಪಕ್ಷ ಬಿಟ್ಟು ಹೋಗಿದ್ದು ಪರಿಣಾಮ ಬೀರಿದೆ. ರಾಜ್ಯದಲ್ಲಿ ಮೋದಿ ಮತ್ತು ಶಾ ತಂತ್ರಗಾರಿಕೆ ನಡೆಯಲ್ಲ. ನಾವೇ ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆಯ ಪ್ರಶ್ನೆ ಬರಲ್ಲ. ಕಳೆದ ಬಾರಿಗಿಂತ ಜೆಡಿಎಸ್ ಕಡಿಮೆ ಸ್ಥಾನ ಗೆಲ್ಲುತ್ತೆ, ಇದು ಜೆಡಿಎಸ್'ನವರಿಗೂ ಗೊತ್ತು. ಜನರು ಬಿಜೆಪಿ ಪರವಾಗಿಲ್ಲ ಎಂದು ನಿನ್ನೆ‌ ನಡೆದ ಘಟನೆ ಸಾಕ್ಷಿ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಭೆಯಲ್ಲಿ ಖಾಲಿ ಖುರ್ಚಿಗಳೆ ಸಾಕ್ಷಿಯಾಗಿವೆ ಎಂದಿದ್ದಾರೆ.