‘ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆ ವೇಳೆ ನಾನು ಸೂಚಿಸಿದವರಿಗೆ ಮನ್ನಣೆ ನೀಡಿ. ಹೀಗೆ ಮಾಡಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ಜವಾಬ್ದಾರಿ ನನ್ನದು. ಇದಾಗದ ಪಕ್ಷದಲ್ಲಿ ಒಬ್ಬ ನಾಯಕನಾಗಿ ಪಕ್ಷದ ಗೆಲುವಿಗೆ ಶ್ರಮಿಸುವೆ'.

ಬೆಂಗಳೂರು(ಎ.23): ‘ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆ ವೇಳೆ ನಾನು ಸೂಚಿಸಿದವರಿಗೆ ಮನ್ನಣೆ ನೀಡಿ. ಹೀಗೆ ಮಾಡಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ಜವಾಬ್ದಾರಿ ನನ್ನದು. ಇದಾಗದ ಪಕ್ಷದಲ್ಲಿ ಒಬ್ಬ ನಾಯಕನಾಗಿ ಪಕ್ಷದ ಗೆಲುವಿಗೆ ಶ್ರಮಿಸುವೆ'.

ಇಂತಹದೊಂದು ಸಂದೇಶವನ್ನು ಮುಖ್ಯ​ಮಂತ್ರಿ ಸಿದ್ದರಾ​ಮಯ್ಯಈಗಾಗಲೇ ತಮ್ಮ ಬೆಂಬಲಿಗರ ಮೂಲಕ ಹೈಕಮಾಂಡ್‌ಗೆ ಸ್ಪಷ್ಟವಾಗಿ ರವಾನಿಸಿದ್ದಾರೆ. ಈಗ ನೇರವಾಗಿ ವರಿಷ್ಠರಿಗೆ ಈ ಮಾತುಗಳನ್ನು ಹೇಳಲು ಸಜ್ಜಾಗಿದ್ದಾರೆ. ಭಾನುವಾರದ ದೆಹಲಿ ಭೇಟಿ ವೇಳೆ ಕಾಲಾವಕಾಶ ದೊರೆತರೇ ವರಿಷ್ಠರಿಗೆ ನೇರವಾಗಿ ಈ ಮಾತು ಹೇಳಲಿದ್ದಾರೆ. ಒಂದು ವೇಳೆ ಕಾಲಾವಕಾಶ ದೊರೆಯದಿದ್ದರೆ ಮುಂದೆ ಯಾವಾಗ ಭೇಟಿದೆ ಅವಕಾಶ ದೊರೆಯುತ್ತದೆಯೋ ಆಗ ಹೇಳಲು ಮಾನಸಿಕವಾಗಿ ತಯಾರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತನ್ಮೂಲಕ ಕೆಪಿಸಿಸಿ ಹುದ್ದೆಗೆ ತಾವು ಸೂಚಿಸಿದವರು ನೇಮಕಗೊಂಡರೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಹಿತಕ್ಕಾಗಿ ಸಂಪೂರ್ಣ ಸಾಮರ್ಥ್ಯ ವಿನಿಯೋಗಿಸುವ ಹಾಗೂ ಸೋಲು-ಗೆಲುವಿನ ಸಂಪೂರ್ಣ ಹೊಣೆ ಹೊರಲು ಸಿದ್ಧ ಎಂದು ನೇರ ಸಂದೇಶ ನೀಡಲಿದ್ದಾರೆ. ಒಂದು ವೇಳೆ ತಮಗೆ ಹೊಂದಿಕೆಯಾಗದ ವ್ಯಕ್ತಿಯನ್ನು ಹುದ್ದೆಯಲ್ಲಿ ಕೂರಿಸಿದರೆ ಸೋಲು-ಗೆಲುವಿನ ಸಂಪೂರ್ಣ ಹೊಣೆ ತಮ್ಮದಲ್ಲ ಎಂಬ ಪರೋಕ್ಷವಾಗಿ ವರಿಷ್ಠರಿಗೆ ತಿಳಿಸಲಿದ್ದಾರೆ ಎಂದು ಸಿಎಂ ಆಪ್ತ ಶಾಸಕರೊಬ್ಬರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರು ಅಕ್ಟೋಬರ್‌ವರೆಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬದಲಾವಣೆಯಿಲ್ಲ ಎಂದು ಹೇಳಿದ್ದಾರೆ. ಆದರೂ, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬದಲಾವಣೆಯ ಸಾಧ್ಯತೆ ದಟ್ಟವಾಗಿರುವುದನ್ನು ಸೂಚಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹುದ್ದೆಯ ಆಕಾಂಕ್ಷಿಗಳು, ಅವರ ಬೆಂಬಲಿಗರು ಸತತವಾಗಿ ದೆಹಲಿಗೆ ತೆರಳಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ನಾಯಕರನ್ನು ಈ ಹುದ್ದೆಗೆ ಏಕೆ ತರಬೇಕು ಎಂಬ ರಾಹುಲ್‌ ಗಾಂಧಿಗೆ ಮನನ ಮಾಡಲು ಯತ್ನಿಸುತ್ತಿದ್ದಾರೆ.

ಇಂತಹದೊಂದು ಪ್ರಯತ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಿಂದಲೂ ನಡೆಯುತ್ತಿದೆ. ಈ ಬಳಗದ ಮೂಲಕ ಸಿದ್ದರಾಮಯ್ಯ ಅವರು ತಮ್ಮ ಮನಸ್ಸಿನಲ್ಲಿರುವುದೇನು ಎಂಬುದನ್ನು ಹೈಕಮಾಂಡ್‌ಗೆ ಮುಟ್ಟಿಸಿದ್ದಾರೆ. ಭಾನುವಾರ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಲು ಯತ್ನಿಸಲಿರುವ ಅವರು ಒಂದು ವೇಳೆ ಭೇಟಿಯ ಅವಕಾಶ ದೊರೆತರೆ ನೇರವಾಗಿ ಈ ಮಾತುಗಳನ್ನು ಹೇಳಲಿದ್ದಾರೆ ಎಂದು ಸದರಿ ಶಾಸಕರು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ, ದಲಿತ ಸಿಎಂ ವಿಚಾರ, ಡಿಸಿಎಂ ವಿಚಾರ ಹಾಗೂ ಸರ್ಕಾರ ಟೇಕ್‌ ಆಫ್‌ ಆಗಿಲ್ಲ ಎಂಬಂತಹ ವಿಚಾರಗಳನ್ನು ಆಗಾಗ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಹೀಗಾಗಿ, ಅಲ್ಲದೆ, ಆರು ವರ್ಷ ಪೂರ್ಣಗೊಳಿಸಿರುವ ಮತ್ತು ಸಚಿವ ಸ್ಥಾನವನ್ನೂ ಹೊಂದಿರುವ ಅವರು ಹುದ್ದೆಯಿಂದ ನಿರ್ಗಮಿಸಲು ಇದು ಸಕಾಲ ಎಂಬ ವಿಚಾರವನ್ನು ಸಿದ್ದರಾಮಯ್ಯ ಅವರು ಈಗಾಗಲೇ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಆದರೆ, ಈ ಸ್ಥಾನಕ್ಕೆ ಪರಮೇಶ್ವರ್‌ ಬದಲು ಯಾರು ಬರಬೇಕು ಎಂಬ ವಿಚಾರದಲ್ಲಿ ಗೊಂದಲವಿದೆ. ಸಿದ್ದರಾಮಯ್ಯ ಅವರು ಸೂಚಿಸುತ್ತಿರುವ ವ್ಯಕ್ತಿಗಳನ್ನು ಹುದ್ದೆಗೆ ಬರದಂತೆ ತಡೆಯಲು ಪಕ್ಷದ ಇತರ ಪ್ರಭಾವಿ ಗುಂಪುಗಳು ಯತ್ನಿಸುತ್ತಿವೆ. ಹೀಗಾಗಿ, ತಮ್ಮ ಮನಸ್ಸಿನಲ್ಲಿ ಇರುವ ಮಾತನ್ನು ಮಾತನ್ನು ಹೈಕಮಾಂಡ್‌ ನೇರವಾಗಿ ತಿಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ಮುಂದಿನ ಬಾರಿ ಹೈಕಮಾಂಡ್‌ನ ವರಿಷ್ಠರನ್ನು ಸಿಎಂ ನೇರಾನೇರ ಭೇಟಿಯಾದ ಸಂದರ್ಭದಲ್ಲಿ ಈ ಮಾತನ್ನು ನೇರವಾಗಿ ಹೇಳಲಿದ್ದಾರೆ ಎಂಬುದು ಸಿಎಂ ಆಪ್ತರು ಖಚಿವಾಗಿ ಹೇಳುತ್ತಾರೆ.

ಮಾತು ಹೇಳಿದ ನಂತರ ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ದವಾಗಿ ಸಿಎಂ ಕೆಲಸ ಮಾಡಲಿದ್ದಾರೆ. ಒಂದು ವೇಳೆ ತಾವು ಸೂಚಿಸದ ವ್ಯಕ್ತಿಯನ್ನು ಹುದ್ದೆಗೆ ತಂದರೂ ಪಕ್ಷದ ಹಿತಕ್ಕಾಗಿ ತಮ್ಮ ಸಾಮರ್ಥ್ಯವನ್ನು ಸಿದ್ದರಾಮಯ್ಯ ವಿನಿಯೋಗಿಸಲಿದ್ದಾರೆ. ಆದರೆ, ಹೊಣೆಗಾರಿಕೆ ಹೊರುವುದಿಲ್ಲ ಎಂದು ಅವರು ವಿವರಿಸುತ್ತಾರೆ.

ಸಿಎಂ ಮನಸ್ಸಲ್ಲಿ ಇನ್ನೂ ಎಸ್‌.ಆರ್‌.ಪಾಟೀಲ್‌: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಿಎಂ ಯಾರು ಸೂಚಿಸಲಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಉತ್ತರ ಕರ್ನಾಟಕ ಭಾಗದ ಲಿಂಗಾಯತರಿಗೆ ಈ ಹುದ್ದೆ ದೊರೆಯಬೇಕು ಎಂಬುದು ಅವರ ಸ್ಪಷ್ಟನಿಲುವು. ಈ ಹಿನ್ನೆಲೆಯಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಹೆಸರುಗಳು ಸಚಿವರಾದ ಎಂ.ಬಿ. ಪಾಟೀಲ್‌ ಹಾಗೂ ಮಾಜಿ ಸಚಿವ ಎಸ್‌.ಆರ್‌. ಪಾಟೀಲ್‌.

ಎಂ.ಬಿ. ಪಾಟೀಲ್‌ ನೇಮಕಕ್ಕೆ ಸಿಎಂ ವಿರೋಧವಿಲ್ಲವಾದರೂ ಸಿಎಂ ಅವರಿಗೆ ಆಯ್ಕೆ ನೀಡಿದರೆ ಅವರು ಸೂಚಿಸುವುದು ಎಸ್‌.ಆರ್‌. ಪಾಟೀಲ್‌ ಅವರನ್ನೇ ಎಂದು ಅವರ ಆಪ್ತ ವಲಯಗಳು ಸ್ಪಷ್ಟಪಡಿಸಿವೆ. ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತರಿಗೆ ನೀಡಬೇಕು ಎಂಬ ವಿಚಾರ ಹೈಕಮಾಂಡ್‌ ಮುಂದೆ ಪ್ರಸ್ತಾಪವಾದಾಗ ಎಂ.ಬಿ. ಪಾಟೀಲ್‌ ಅವರ ಹೆಸರನ್ನು ಅಹ್ಮದ್‌ ಪಟೇಲ್‌ ಅವರೇ ಸೂಚಿಸಿದ್ದರು. ಇದಕ್ಕೆ ಸಿಎಂ ಬೇಡ ಎಂದೇನೂ ಹೇಳಿಲ್ಲ. ಆದರೂ, ಮುಂದಿನ ಭೇಟಿಯ ವೇಳೆ ತಮ್ಮ ಆಯ್ಕೆ ಎಸ್‌.ಆರ್‌. ಪಾಟೀಲ್‌ ಎಂದು ಅವರು ಮತ್ತೆ ಹೈಕಮಾಂಡ್‌ ಮುಂದೆ ಪುನರುಚ್ಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದು ವರಸೆ:

1 ನಾನು ಸೂಚಿಸಿದ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದರೆ ಸಾರ್ವತ್ರಿಕ ಚುನಾವಣೆ ಸೋಲು-ಗೆಲುವು ನನ್ನ ಹೊಣೆ

2 ಇಲ್ಲದಿದ್ದರೆ, ಪಕ್ಷದ ನಾಯಕನಾಗಿ ಗೆಲುವಿಗಾಗಿ ಶ್ರಮಿಸುವೆ, ಹೊಣೆ ಹೊರುವುದಿಲ್ಲ

3 ಹೀಗಂತ ಹೈಕಮಾಂಡ್‌ಗೆ ಸ್ಪಷ್ಟವಾಗಿ ಸೂಚಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

4 ತಮ್ಮ ಬೆಂಬಲಿಗರ ಮೂಲಕ ಈ ಸಂದೇಶ ವರಿಷ್ಠರಿಗೆ ಈಗಾಗಲೇ ರವಾನಿಸಿರುವ ಸಿಎಂ

5 ಭಾನುವಾರ ಭೇಟಿಗೆ ಕಾಲಾವಕಾಶ ದೊರೆತರೆ ನೇರವಾಗಿ ಈ ಮಾತುಗಳನ್ನು ಹೇಳಲು ನಿರ್ಧಾರ