1 ತಿಂಗಳು 224 ಕ್ಷೇತ್ರಗಳಲ್ಲೂ ಸಮಾವೇಶ | ಅದಕ್ಕೂ ಮುನ್ನ 4 ವಿಭಾಗೀಯ ರ್ಯಾಲಿ | ಬೂತ್ ಸಭೆಗೆ ರಾಹುಲ್ ಆಗಮನ?
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ತಮ್ಮದೇ ನೇತೃತ್ವ ಎಂಬುದನ್ನು ದೃಢಪಡಿಸಲು ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ. 15 ರಿಂದ ಜ. 15ರವರೆಗೂ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಮುಟ್ಟುವ ಪ್ರಚಾರ ಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ.
ಒಂದು ತಿಂಗಳ ಅವಧಿಯ ಈ ಪ್ರಚಾರ ಯಾತ್ರೆ ವೇಳೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಮಾವೇಶ ನಡೆಸುವ ಗುರಿ ಹೊಂದಿದ್ದು, ಇದಕ್ಕಾಗಿ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಮೊದಲ ಅಧಿಕೃತ ಚುನಾವಣಾ ರ್ಯಾಲಿ ಇದಾಗಿದ್ದು, ಚುನಾವಣಾ ಪ್ರಚಾರ ಸಭೆಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರಿಗೂ ಸೂಚನೆ ನೀಡಲಾಗಿದೆ.
ರಾಹುಲ್ ಗಾಂಧಿ ಆಗಮನ: ಮುಖ್ಯಮಂತ್ರಿಯವರ ರಾಜ್ಯ ಪ್ರವಾಸಕ್ಕೂ ಮುನ್ನ ಕೆಪಿಸಿಸಿಯು ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ವಿಭಾಗೀಯ ಮಟ್ಟದ ಸಮಾವೇಶಗಳನ್ನು ನಡೆಸಲಿದೆ. ಜತೆಗೆ ಒಂದು ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲು ಶುಕ್ರವಾರ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜತೆಗೆ, ಬೂತ್‌ಮಟ್ಟದ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಸಲುವಾಗಿ ಬೆಂಗಳೂರಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ರಾಜ್ಯ ಮಟ್ಟದ ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಸಭೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
