ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಪ್ರಕ್ರಿಯೆಯು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿದ್ದು, ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ರಘು ಆಚಾರ್ ನಿವಾಸ ಮತ್ತು ಕಚೇರಿ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಅತಂತ್ರತೆ, ಅಭದ್ರತೆ ಸೃಷ್ಟಿಸುವುದು ಇದರ ಉದ್ದೇಶ. ರಾಜಕೀಯ ಪ್ರೇರಿತವಾಗಿ ದಾಳಿ ನಡೆಸಲಾಗುತ್ತಿದೆ ಎಂದರು.

ಐಟಿ ಅಧಿಕಾರಿಗಳು ಬಿಜೆಪಿಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮೇಲೆ ಯಾಕೆ ದಾಳಿ ನಡೆಸುತ್ತಿಲ್ಲ. ಎರಡೆರಡು ನೋಟು ಎಣಿಕೆ ಯಂತ್ರ ಇಟ್ಟುಕೊಂಡಿರುವ ಈಶ್ವರಪ್ಪ ಮೇಲೆ ಯಾಕೆ ದಾಳಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ಚುನಾವಣೆಯಲ್ಲಿ ಸೋಲಿನ ಭಯ ಉಂಟಾಗಿದೆ. ಹೀಗಾಗಿ ದಾಳಿ ನಡೆಸಿ ಕಾಂಗ್ರೆಸ್ ನಾಯಕನ್ನು ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ.

ರಾಜ್ಯದ ಜನರ ಮಿಡಿತ ನಮಗೆ ಅರ್ಥವಾಗಿದ್ದು, ಕಾಂಗ್ರೆಸ್‌ಗೆ ಮತ ಚಲಾಯಿಸಲಿದ್ದಾರೆ. ಈ ಬಗ್ಗೆ ನಮಗೆ ವಿಶ್ವಾಸ ಇದೆ. ಆದರೆ, ಅತಿಯಾದ ವಿಶ್ವಾಸ ಇಲ್ಲ ಎಂದು ಹೇಳಿದರು. ಈ ನಡುವೆ, ರಘು ಆಚಾರ ನಿವಾಸ ಮತ್ತು ಕಚೇರಿ ಮೇಲಿನ ದಾಳಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಕೆ.ಜೆ.ಜಾರ್ಜ್ ಅವರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.