Asianet Suvarna News Asianet Suvarna News

ಉತ್ತರ ಭಾರತೀಯರ ಬಗ್ಗೆ ಸಿಎಂ ಗರಂ

ಇತ್ತೀಚೆಗೆ ಸೃಷ್ಟಿಯಾಗಿರುವ ನಾಡಧ್ವಜ ವಿವಾದ, ನಾಡಧ್ವಜವನ್ನು ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ‘ಏಕತೆಯ ಪಾಠ’ ಹೇಳಿವೆ ಎನ್ನಲಾದ ಕೆಲವು ಉತ್ತರ ಭಾರತೀಯ ಮಾಧ್ಯಮಗಳು ಹಾಗೂ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಮಾಡುತ್ತಿದೆ ಎನ್ನಲಾದ ತಾರತಮ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸುದೀರ್ಘವಾಗಿ ತಿರುಗೇಟು ನೀಡುವ ಯತ್ನವನ್ನು ಮಾಡಿದ್ದಾರೆ.

CM Siddaramaiah Slams Union Govt And North Medias

ಬೆಂಗಳೂರು : ಇತ್ತೀಚೆಗೆ ಸೃಷ್ಟಿಯಾಗಿರುವ ನಾಡಧ್ವಜ ವಿವಾದ, ನಾಡಧ್ವಜವನ್ನು ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ‘ಏಕತೆಯ ಪಾಠ’ ಹೇಳಿವೆ ಎನ್ನಲಾದ ಕೆಲವು ಉತ್ತರ ಭಾರತೀಯ ಮಾಧ್ಯಮಗಳು ಹಾಗೂ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಮಾಡುತ್ತಿದೆ ಎನ್ನಲಾದ ತಾರತಮ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸುದೀರ್ಘವಾಗಿ ತಿರುಗೇಟು ನೀಡುವ ಯತ್ನವನ್ನು ಮಾಡಿದ್ದಾರೆ.

ಒಕ್ಕೂಟ ವ್ಯವಸ್ಥೆ ಹಾಗೂ ಪ್ರಾದೇಶಿಕ ಅನನ್ಯತೆ ಬಗ್ಗೆ ಫೇಸ್‌ಬುಕ್‌ನಲ್ಲಿ ಸವಿಸ್ತಾರವಾಗಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ನಾಡಧ್ವಜದ ಪ್ರಸ್ತಾವನೆ ವಿರುದ್ಧ ಹರಿಹಾಯ್ದಿದ್ದವು ಎನ್ನಲಾದ ಉತ್ತರ ಭಾರತದ ಮಾಧ್ಯಮಗಳ ಧೋರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮ ರಾಜ್ಯ ಸರ್ಕಾರ ನಮ್ಮದೇ ನಾಡಧ್ವಜ ಅಳವಡಿಸಿಕೊಳ್ಳಲು ಸಮಿತಿ ರಚನೆ ಮಾಡಿಕೊಂಡಿದ್ದಕ್ಕೆ ದಿಲ್ಲಿ ಮೂಲದ ಸುದ್ದಿ ವಾಹಿನಿಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಭಾರತದ ಏಕತೆಗೆ ನಾಡ ಧ್ವಜ ಮುಳುವಾಗುತ್ತದೆ ಎಂಬಂತೆ ಸುದ್ದಿ ವಾಚಕರು ಕರ್ನಾಟಕಕ್ಕೆ ರಾಷ್ಟ್ರೀಯತೆಯ ಬಗ್ಗೆ ಪುಂಖಾನುಪುಂಖವಾಗಿ ಪಾಠ ಬೋಧಿಸಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ವರ್ಷ ನಾಡಧ್ವಜ ತಜ್ಞರ ಸಮಿತಿ ವರದಿ ಸಲ್ಲಿಸಿದ್ದು, ಯಥಾವತ್ತಾಗಿ ಅಂಗೀಕರಿಸಿ ಲಾಂಛನಗಳ ಮತ್ತು ಹೆಸರುಗಳ (ದುರುಪಯೋಗ ತಡೆಗಟ್ಟುವಿಕೆ) ಕಾಯ್ದೆ, 1956’ರ ಅಡಿಯಲ್ಲಿ ಕರ್ನಾಟಕದ ಹೊಸ ಧ್ವಜವನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದೇವೆ. ಕನ್ನಡಿಗರು ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಿದರೆ, ಕನ್ನಡಿಗರು ತಮ್ಮದೇ ಆದ ನಾಡಧ್ವಜ ಅಳವಡಿಸಿಕೊಂಡರೆ, ತಮ್ಮ ನಾಡಿನ ಅಸ್ಮಿತೆಯ ಬದುಕನ್ನು ಬದುಕಿದರೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹೇಗೆ ಅಡ್ಡಿಯಾಗುತ್ತದೆ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕನ್ನಡಿಗನಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದರೆ ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುವುದಿಲ್ಲ ಎಂದರ್ಥವಲ್ಲ. ಹಾಗಾಗಿ, ನಾವು ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಯ ಬಗ್ಗೆ ಮಾತಾಡಿದಾಗ, ಹಿಂದಿ ಹೇರಿಕೆಯನ್ನು ಪ್ರತಿರೋಧಿಸಿದಾಗ ಅಥವಾ ನಮ್ಮದೇ ಸ್ವಂತ ನಾಡಧ್ವಜ ಅಳವಡಿಸಿಕೊಳ್ಳಲು ಮುಂದಾದಾಗ, ನಾವು ಒಂದು ಸದೃಢ ಭಾರತ ನಿರ್ಮಾಣದ ಹಾದಿಯಲ್ಲೇ ಇರುತ್ತೇವೆ. ಅದಕ್ಕೆ ಬೇಕಾದ ಕೊಡುಗೆಯನ್ನೂ ನೀಡುತ್ತಿರುತ್ತೇವೆ. ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಇದು ನಮ್ಮ ಅಸ್ಮಿತೆಯ ಪ್ರಶ್ನೆ’ ಎಂದು ಬರೆದಿದ್ದಾರೆ.

ಕೇಂದ್ರದ ವಿರುದ್ಧ ಕಿಡಿ:

ಭಾರತವು ಹೊರ ರಾಷ್ಟ್ರಗಳೊಂದಿಗೆ ನಡೆಸುವ ವ್ಯವಹಾರದ ಮೇಲೆ ಪ್ರಭಾವ ಬೀರುವ ಆರ್ಥಿಕ ನೀತಿಗಳು, ದೇಶದ ಒಳಗೆ ಇರುವ ರಾಜ್ಯಗಳ ಮೇಲೂ ಪರಿಣಾಮ ಉಂಟುಮಾಡುತ್ತವೆ. ಆದರೂ ಸಹಾ, ದೇಶದ ಆರ್ಥಿಕ ನೀತಿಯನ್ನು ರೂಪಿಸುವಾಗ ರಾಜ್ಯಗಳ ಧ್ವನಿಗೆ ಆಸ್ಪದವೇ ಇಲ್ಲ.

‘ದಕ್ಷಿಣ ಏಷ್ಯಾ ಮುಕ್ತ ಮಾರುಕಟ್ಟೆಒಪ್ಪಂದವು ವಿಯೆಟ್ನಾಂನ ಮೆಣಸನ್ನು ಶ್ರೀಲಂಕಾದ ಮೂಲಕ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ ಇದರಿಂದ ಕರ್ನಾಟಕ ಮತ್ತು ಕೇರಳದ ಮೆಣಸು ಬೆಳೆಯುವ ರೈತರ ಬದುಕು ಆತಂಕಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರದ ವ್ಯಾಪಾರ ನೀತಿಯು ಕೃಷಿ ಉತ್ಪನ್ನಗಳನ್ನು ಹೊರಗಡೆಯಿಂದ ಆಮದು ಮಾಡಿಕೊಳ್ಳುವುದಕ್ಕೆ ಒತ್ತು ನೀಡುತ್ತಿದೆ. ಆದರೆ ನಮ್ಮ ಕೃಷಿ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುವುದನ್ನು ಆ ನೀತಿ ಪ್ರೋತ್ಸಾಹಿಸುತ್ತಿಲ್ಲ. ಜಿಎಸ್‌ಟಿ ಮಂಡಳಿಯಲ್ಲೂ ಇದೇ ಆಗಿದೆ’ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

‘ಒಕ್ಕೂಟ ವ್ಯವಸ್ಥೆಯ ದೇಶವಾಗಿ ಎಪ್ಪತ್ತು ವರ್ಷ ಕಳೆದಿದೆ. ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಾದ ಪ್ರಕ್ಷುಬ್ಧತೆ ಹಾಗೂ ಸ್ವಾಯತ್ತತೆಯ ಕೂಗು ಹಾಕುತ್ತಿರುವ ಪಂಜಾಬ್‌, ಅಸ್ಸಾಂನಂತಹ ರಾಜ್ಯಗಳಿಂದ ಒಕ್ಕೂಟ ವ್ಯವಸ್ಥೆಯಿಂದ ರಾಜ್ಯಗಳ ಸಂಯುಕ್ತ ವ್ಯವಸ್ಥೆಯತ್ತ ರೂಪಾಂತರವಾಗುತ್ತಿದ್ದೇವೆ. ಹೀಗಿದ್ದಾಗ ನಾಡಧ್ವಜದ ಮೂಲಕ ಪ್ರಾದೇಶಿಕ ಅನನ್ಯತೆ ಹಾಗೂ ಸಂಯುಕ್ತ ಸ್ವಾಯತ್ತತೆಯನ್ನು ಅಪೇಕ್ಷಿಸುವುದು ಹೇಗೆ ತಪ್ಪಾಗುತ್ತದೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕನ್ನಡದ ಅನನ್ಯತೆಯೇ ಕರ್ನಾಟಕದ ಹೆಮ್ಮೆ. ಕ್ರಿ.ಶ. 2ನೇ ಶತಮಾನದಲ್ಲೇ ಕನ್ನಡ ಭಾಷೆಯ ಶಾಸನಗಳು ಪತ್ತೆಯಾಗಿದ್ದು, ನಮ್ಮದು ಪುರಾತನ ಭಾಷೆ. ನಾವು ಹಲವು ದಶಕಗಳಿಂದ ಕೆಂಪು, ಹಳದಿ ಬಾವುಟ ಆರಿಸಿ ಇದನ್ನು ಪ್ರಾದೇಶಿಕ ಅನನ್ಯತೆಯಾಗಿ ನಂಬಿದ್ದೇವೆ. ಇದೆಲ್ಲಾ ಪರಿಗಣಿಸಿದಾಗ ದೆಹಲಿ ಸ್ಟುಡಿಯೋದಲ್ಲಿ ಕೂತು ನಮ್ಮ ಅನನ್ಯತೆ ಪ್ರತಿಪಾದನೆಯ ಬಗ್ಗೆ ಗಾಬರಿಯ ಮಾತುಗಳನ್ನು ಹೊರಚೆಲ್ಲಿದ್ದ ಟೀವಿ ನಿರೂಪಕರ ಆತಂಕವೆಲ್ಲ ಅರ್ಥಹೀನ’ ಎಂದು ಉತ್ತರ ಭಾರತೀಯ ಮಾಧ್ಯಮಗಳ ಬಗ್ಗೆ ಟೀಕಿಸಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ:

ತುಲನಾತ್ಮಕವಾಗಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು, ಕೇಂದ್ರದಿಂದ ಅನುದಾನವನ್ನು ಪಡೆಯುತ್ತಿರುವುದಕ್ಕಿಂತಲೂ ಹೆಚ್ಚು ಪಾಲನ್ನು ತೆರಿಗೆರೂಪದಲ್ಲಿ ಕೇಂದ್ರಕ್ಕೆ ಸಂದಾಯ ಮಾಡುತ್ತಿವೆ.

ನಮಗೆ ಕೇಂದ್ರದಿಂದ ದಕ್ಕುತ್ತಿರುವುದೆಲ್ಲ ಕೇಂದ್ರೀಯ ತೆರಿಗೆಯ ವಿಕೇಂದ್ರಿಕರಣದ ತರುವಾಯ ರಾಜ್ಯಕ್ಕೆ ಸಿಗುವ ಪಾಲಿನ ರೂಪದಲ್ಲಿ ಸಿಗುತ್ತಿದೆ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಅನುದಾನದ ರೂಪದಲ್ಲಿ ಮಾತ್ರ ಬರುತ್ತಿದೆ. ಇವೆಲ್ಲವೂ ಹಲವು ಮಿತಿ ಹೊಂದಿವೆ.

ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗೆ ಅನೇಕ ರೀತಿಯ ಆರ್ಥಿಕ ನೆರವು ನೀಡುತ್ತಿವೆ. ವಿಂಧ್ಯ ಪರ್ವತಗಳಿಂದ ದಕ್ಷಿಣಕ್ಕಿರುವ ಆರು ರಾಜ್ಯಗಳು ತೆರಿಗೆ ರೂಪದಲ್ಲಿ ಹೆಚ್ಚಿನದನ್ನು ಕೊಟ್ಟರೂ ಅವುಗಳಿಗೆ ಅನುದಾನವಾಗಿ ದಕ್ಕುತ್ತಿರುವುದು ತೀರಾ ಕಡಿಮೆ ಮೊತ್ತ.

ಉದಾಹರಣೆಗೆ, ಉತ್ತರ ಪ್ರದೇಶ ತಾನು ಸಂದಾಯ ಮಾಡುವ ಪ್ರತಿ 1 ರು. ತೆರಿಗೆಗೆ ಪ್ರತಿಯಾಗಿ 1.79 ರು. ಅನುದಾನವನ್ನು ಪಡೆಯುತ್ತಿದೆ. ಆದರೆ ಕರ್ನಾಟಕದ ಪ್ರತಿ 1 ರು. ತೆರಿಗೆಗೆ ಪ್ರತಿಯಾಗಿ ಕೇಂದ್ರದಿಂದ ಬರುತ್ತಿರುವುದು ಕೇವಲ 0.47 ರುಪಾಯಿ ಅನುದಾನ!

ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಬೇಕೆನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಅಭಿವೃದ್ಧಿಗೆ ಪ್ರೋತ್ಸಾಹ ಎಲ್ಲಿ? ದಕ್ಷಿಣದ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಯಲ್ಲಿ ಹೆಚ್ಚೂ-ಕಮ್ಮಿ ವ್ಯಕ್ತಿ ಪರ್ಯಾಯದ ಹಂತ ತಲುಪಿ ಸಮತೋಲನ ಸಾಧಿಸಿವೆ. ಆದರೂ ಕೇಂದ್ರೀಯ ತೆರಿಗೆಗಳನ್ನು ವಿತರಿಸುವಾಗ ಜನಸಂಖ್ಯೆಯೇ ಪ್ರಧಾನ ಆಧಾರವಾಗಿ ಉಳಿದಿದೆ. ಇನ್ನೂ ಎಷ್ಟುದಿನ ನಾವು ಜನಸಂಖ್ಯಾ ಏರಿಕೆಯ ತಾಪ ಅನುಭವಿಸುತ್ತಲೇ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ನೀತಿಗಳ ವಿರುದ್ಧ ಹರಿಹಾಯ್ದಿದ್ದಾರೆ.

Follow Us:
Download App:
  • android
  • ios